ಬೆಂಗಳೂರು: ಬಿಜೆಪಿಯಿಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಪುತ್ರ ಕೆ.ಇ.ಕಾಂತೇಶ್ಗೆ ಹಾವೇರಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಮನವಿ ಮಾಡಿದ್ದರು. ಆದರೆ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಬಂಡಾಯ ಎದ್ದಿರುವ ಈಶ್ವರಪ್ಪ ಮನವೊಲಿಕೆಗೆ ಕೇಂದ್ರ ನಾಯಕರ ತಂಡ, ರಾಜ್ಯ ನಾಯಕರು, ಸ್ಥಳೀಯರ ಮುಖಂಡರು ಯತ್ನಿಸಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಇತ್ತೀಚೆಗೆ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಮನೆಗೆ ಬಂದಾಗ, ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ತಮ್ಮ ಅಸಮಾಧಾನ ಹೊರಹಾಕಿದ್ದರು.
ಇಷ್ಟು ದಿನ ಯಡಿಯೂರಪ್ಪ ಆಯ್ತು. ಈಗ ವಿಜಯೇಂದ್ರಗೆ ಜೈಕಾರ ಹಾಕ್ಬೇಕಾ ಅಂತಾ ಪ್ರಶ್ನಿಸಿದ್ದರು. ಮೋದಿ ಕಾರ್ಯಕ್ರಮ ಇದ್ದಿದ್ದರಿಂದ ಕೊನೆ ಕ್ಷಣದಲ್ಲಿ RSS ನಾಯಕರೂ ಸಹ ಮನವೊಲಿಕೆಗೆ ಮುಂದಾಗಿದ್ದರು. ರಾಮಮಂದಿರದಿಂದ ಕರೆ ಮಾಡಿದ್ದ ಗೋಪಾಲ್ ಅವರ ಸಂಧಾನಕ್ಕೂ ಈಶ್ವರಪ್ಪ ಸೊಪ್ಪು ಹಾಕಿರಲಿಲ್ಲ.