ಶಿವಮೊಗ್ಗ: ಬಾರ್ನಲ್ಲಿ ಮದ್ಯ ಸೇವಿಸಿ ಸಾಲದ ಹಣ ಪಾವತಿಸಿಲ್ಲ ಎಂಬ ವಿಚಾರಕ್ಕೆ ಬಾರ್ನ ಕ್ಯಾಷಿಯರ್ ಹಾಗೂ ಮಾಲೀಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರಿಂದ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪತ್ನಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಬಾರ್ನ ಕ್ಯಾಷಿಯರ್ ಮಹಿಳೆಗೆ ಕರೆ ಮಾಡಿ, ನಿಮ್ಮ ಪತಿ ಬಾರ್ನಲ್ಲಿ ಮದ್ಯ ಸೇವಿಸಿ ₹35 ಸಾವಿರ ಸಾಲ ಮಾಡಿದ್ದಾರೆ. ಹಣ ಪಾವತಿಸದ ಹಿನ್ನೆಲೆಯಲ್ಲಿ ಅವರನ್ನು ಹಲ್ಲೆ ಮಾಡಿ ಹೊರಗೆ ಕಳುಹಿಸಲಾಗಿದ್ದು, ಅವರ ಬೈಕ್ನ್ನು ನಮ್ಮ ವಶದಲ್ಲಿ ಇರಿಸಿಕೊಳ್ಳಲಾಗಿದೆ. ಬಂದು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಕೂಡಲೇ ಮಹಿಳೆ ತಮ್ಮ ಮಕ್ಕಳನ್ನು ಕಳುಹಿಸಿ ಪತಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಮರುದಿನ ಈ ಬಗ್ಗೆ ವಿಚಾರಿಸಿದಾಗ, ತಾನು ಕೇವಲ ₹8 ಸಾವಿರದಷ್ಟು ಸಾಲ ಮಾಡಿದ್ದು, ಬಾರ್ನ ಕ್ಯಾಷಿಯರ್ ಹಾಗೂ ಮಾಲೀಕರು ಹಲ್ಲೆ ನಡೆಸಿದ್ದಾರೆ. ಹಣ ಪಾವತಿಸುವಂತೆ ಒತ್ತಾಯಿಸಿ ಬೈಕ್ ನೀಡದೆ ಅವಮಾನಿಸಿದ್ದಾರೆ ಎಂದು ಪತಿ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.
ಬಳಿಕ ಪತ್ನಿ ತಮ್ಮ ಕಿವಿಯೋಲೆಗಳನ್ನು ಅಡವಿಟ್ಟು ₹20 ಸಾವಿರ ಸಾಲ ತೀರಿಸಿ ಬಾರ್ನಲ್ಲಿದ್ದ ಬೈಕ್ನ್ನು ಬಿಡಿಸಿಕೊಂಡು ಬಂದಿದ್ದಾರೆ. ಆದರೆ, ಅದೇ ರಾತ್ರಿ ಮನೆಗೆ ಬಂದಾಗ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಬಾರ್ನಲ್ಲಿ ನಡೆದ ಹಲ್ಲೆ ಹಾಗೂ ಅವಮಾನವೇ ಪತಿಯ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿರುವ ಮಹಿಳೆ, ಬಾರ್ನ ಕ್ಯಾಷಿಯರ್ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
