ಸಾಗರ: ಮಲೆನಾಡಿನ ರೈತರು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಕೆಪಿಸಿ (KPC) ಭೂಮಿ ಸಾಗುವಳಿ ಹಾಗೂ ಅರಣ್ಯ ಭೂಮಿ ಹಕ್ಕು ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಂದ ಸಂಕಷ್ಟ ಎದುರಿಸುತ್ತಿದ್ದರೂ, ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ವಾಕ್ಸಮರದಲ್ಲಿ ತೊಡಗಿದ್ದಾರೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ತೀ.ನಾ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ರಾಜಕೀಯ ನಡೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಾಗರ ಕ್ಷೇತ್ರದ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಿಫಲರಾಗಿದ್ದಾರೆ. ನಗರದ ಅಭಿವೃದ್ಧಿಯ ವಿಚಾರದಲ್ಲೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಬಿಜೆಪಿಯ ಮಾಜಿ ಶಾಸಕರು ಅಧಿಕಾರದಲ್ಲಿದ್ದಾಗ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ, ಈಗ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ರಾಜಕೀಯ ಜಗಳದಲ್ಲಿ ನಿರತರಾಗಿರುವ ನಾಯಕರ ವರ್ತನೆ ಜನರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಟೀಕಿಸಿದರು.
ಶರಾವತಿ ಸಂತ್ರಸ್ತರ ಕಡತದ ಬಗ್ಗೆ ಆರ್ಟಿಐ ದಾಖಲೆ ಉಲ್ಲೇಖ
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ನೀಡುತ್ತಿರುವ ಹೇಳಿಕೆಗಳು ವಾಸ್ತವಕ್ಕೆ ವಿರುದ್ಧವಾಗಿವೆ ಎಂದು ಶ್ರೀನಿವಾಸ್ ಆರೋಪಿಸಿದರು.
ಮುಳುಗಡೆ ಸಂತ್ರಸ್ತರ ಕಡತಗಳನ್ನು ಜಿಲ್ಲಾಧಿಕಾರಿಗಳು ದೆಹಲಿಗೆ ಕಳುಹಿಸಿದ್ದಾರೆ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ತಾವು ಪಡೆದಿರುವ ಲಿಖಿತ ಉತ್ತರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಯಾವುದೇ ಪ್ರಸ್ತಾವನೆ ದೆಹಲಿಗೆ ರವಾನೆಯಾಗಿಲ್ಲ, ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಲಾಗಿದೆ.
ಈ ಮೂಲಕ ಶಾಸಕರ ಹೇಳಿಕೆ ಮತ್ತು ಅಧಿಕೃತ ದಾಖಲೆಗಳ ನಡುವೆ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ ಎಂದರು.
ಕೆಪಿಸಿ ಭೂಮಿ ಸಾಗುವಳಿ ಸಮಸ್ಯೆ ಕುರಿತು ಪ್ರಶ್ನಿಸಿದಾಗ ಶಾಸಕರು ಈ ಬಗ್ಗೆ ಮಾತನಾಡಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ. 2025ರ ಜನವರಿ 6ರಂದು ತಮ್ಮ ತಂಡದೊಂದಿಗೆ ಶಾಸಕರ ಕಚೇರಿಗೆ ತೆರಳಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಸಲ್ಲಿಸಿ ಹಿಂಬರಹ ಪಡೆದಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಚಿವರು, ಸಂಸದರ ವಾಕ್ಸಮರಕ್ಕೆ ಆಕ್ಷೇಪ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ನಡುವಿನ ವಾಕ್ಸಮರದ ಬಗ್ಗೆಯೂ ತೀ.ನಾ. ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳು ಮತ್ತು ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸಬೇಕಾದ ಸಚಿವರು ಹಾಗೂ ಸಂಸದರು ವೈಯಕ್ತಿಕ ಟೀಕೆ, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಸರಿಯಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಪರಸ್ಪರ ವೈಯಕ್ತಿಕವಾಗಿ ಟೀಕಿಸಿಕೊಳ್ಳುವ ಬದಲು ಜನರ ಸಮಸ್ಯೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮಧು ಬಂಗಾರಪ್ಪ ಅವರು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದರೂ, ನೀಡಿದ್ದ ಭರವಸೆಗಳು ಈಡೇರಿಲ್ಲ. ಅವರ ಕ್ಷೇತ್ರದಲ್ಲಿಯೇ 1,200ಕ್ಕೂ ಹೆಚ್ಚು ಫಲ ನೀಡುವ ಅಡಿಕೆ ಮರಗಳನ್ನು ಕಡಿಯಲಾಗಿದೆ. ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಭರವಸೆಗಳೂ ಈಡೇರಿಲ್ಲ ಎಂದು ಆರೋಪಿಸಿದರು.
ಮಲೆನಾಡಿನ ರೈತರ ಬದುಕಿಗೆ ಸಂಬಂಧಿಸಿದ ಶರಾವತಿ ಮುಳುಗಡೆ, ಕೆಪಿಸಿ ಭೂಮಿ ಸಾಗುವಳಿ ಹಾಗೂ ಅರಣ್ಯ ಭೂಮಿ ಸಮಸ್ಯೆಗಳಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಆದ್ಯತೆ ನೀಡಿ ಪರಿಹಾರ ಕಲ್ಪಿಸಬೇಕು. ವೈಯಕ್ತಿಕ ರಾಜಕೀಯ ಸಂಘರ್ಷ ಬದಿಗಿಟ್ಟು ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ತೀ.ನಾ. ಶ್ರೀನಿವಾಸ್ ಒತ್ತಾಯಿಸಿದರು.
