ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ವೈಯಕ್ತಿಕ ಟೀಕೆಗಳನ್ನು ಬದಿಗಿಟ್ಟು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಸದ ಬಿ.ವೈ.ರಾಘವೇಂದ್ರ ಸವಾಲು ಹಾಕಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸೇವೆ ಪುನರಾರಂಭಿಸುವುದು ಎಲ್ಲರ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಮಾಡುವ ಬದಲು ಮಧ್ಯ ಕರ್ನಾಟಕದ ಜನರಿಗೆ ಉತ್ತಮ ವಿಮಾನಯಾನ ಸೌಲಭ್ಯ ಕಲ್ಪಿಸಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಿದೆ ಎಂದರು.
ಉಡಾನ್ ಯೋಜನೆಯಡಿ ಮೂರು ವರ್ಷಗಳ ಕಾಲ ಶಿವಮೊಗ್ಗದಲ್ಲಿ ವಿಮಾನಯಾನ ಸೇವೆ ಒದಗಿಸಲಾಗಿತ್ತು. ಯೋಜನೆಯ ನಿಯಮದಂತೆ ಮೂರು ವರ್ಷದ ಬಳಿಕ ಒಂದು ವರ್ಷದ ವಿರಾಮವಿದ್ದು, ನಂತರ ಮತ್ತೆ ವಿಮಾನಯಾನಕ್ಕೆ ಅವಕಾಶ ದೊರೆಯಲಿದೆ. ಬೆಂಗಳೂರು-ಶಿವಮೊಗ್ಗ ಹಾಗೂ ಶಿವಮೊಗ್ಗ-ಹೈದರಾಬಾದ್ ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಿಸಲು ರಾಜ್ಯ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸ್ಟಾರ್ ಏರ್ಲೈನ್ಸ್ ಸಂಸ್ಥೆಯೊಂದಿಗೆ ಚರ್ಚಿಸಲಾಗಿದ್ದು, ರಾಜ್ಯ ಸರ್ಕಾರ ವಿಜಿಎಫ್ (ವೈಯಬಿಲಿಟಿ ಗ್ಯಾಪ್ ಫಂಡಿಂಗ್) ನೆರವು ನೀಡಿದರೆ ವಿಮಾನ ಹಾರಾಟ ಆರಂಭಿಸಲು ಸಿದ್ಧವಿರುವುದಾಗಿ ಸಂಸ್ಥೆ ಪತ್ರ ಬರೆದಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು.
ವಿಮಾನ ನಿಲ್ದಾಣದ ಸುತ್ತಮುತ್ತ ಯಡಿಯೂರಪ್ಪ ಅವರ ಆಸ್ತಿ ಇದೆ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ವಿಮಾನ ನಿಲ್ದಾಣದ ಸುತ್ತ ನಮ್ಮ ಕುಟುಂಬದ ಒಂದು ಗುಂಟೆ ಜಮೀನು ಇದೆ ಎಂದು ಸಾಬೀತುಪಡಿಸಿದರೆ ಯಾವುದೇ ದೇವಾಲಯದಲ್ಲಿ ಗಂಟೆ ಹೊಡೆಯಲು ಸಿದ್ಧ ಎಂದು ಸವಾಲು ಹಾಕಿದರು.
ಇನ್ನು ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಂಡಿದ್ದು, ಆಂಟೆನಾ ಅಳವಡಿಸಲಾಗಿದೆ. ಇನ್ನೊಂದು ವಾರದಲ್ಲಿ ಪ್ರಾಯೋಗಿಕ ಪರೀಕ್ಷೆಗಾಗಿ ವಿಮಾನ ಆಗಮಿಸಲಿದೆ. ಇದಕ್ಕೆ ರಾಜ್ಯ ಸರ್ಕಾರ ಐದಾರು ಕೋಟಿ ರೂ. ಅನುದಾನ ನೀಡುತ್ತಿದೆ. ವಿಮಾನಯಾನ ಸೇವೆ ಪುನರಾರಂಭಕ್ಕೆ ಎದುರಾಗಿರುವ ತಾತ್ಕಾಲಿಕ ಸಮಸ್ಯೆಗಳನ್ನು ಮುಖ್ಯಮಂತ್ರಿ ಪರಿಹರಿಸಬೇಕು ಎಂದು ರಾಘವೇಂದ್ರ ಒತ್ತಾಯಿಸಿದರು.
