Trending

ರೈತರ ಹಿತಕ್ಕಾಗಿ ಸಂಗಮೇಶ್ವರ್ ನಿರಂತರ ಪ್ರಯತ್ನ – ಶಾಸಕರ ಶ್ರಮ ಮರೆಮಾಚುವ ಪ್ರಯತ್ನ ಖಂಡನೀಯ : ಕಾಂಗ್ರೆಸ್

Spread the love

ಭದ್ರಾವತಿ: ಭದ್ರಾ ಜಲಾಶಯದ ನೀರಿನ ಲಭ್ಯತೆ ಹಾಗೂ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಲದಂಡೆ, ಎಡದಂಡೆ ಮತ್ತು ಗೊಂದಿ ನಾಲೆಗಳಿಗೆ ನೀರು ಹರಿಸುವಂತೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ. ಅವರ ಈ ಪ್ರಯತ್ನವನ್ನು ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಭಿನಂದಿಸುತ್ತದೆ. ಆದರೆ ನಾಲೆಗಳಿಗೆ ನೀರು ಹರಿದಿರುವುದನ್ನು ಕೆಲವರು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗಿರುವುದು ಖಂಡನೀಯ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 18ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೀರಾವರಿ ಸಚಿವ ಎನ್. ಚಲುವರಾಯಸ್ವಾಮಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಭದ್ರಾ ಜಲಾಶಯದ ನೀರಿನ ನಿರ್ವಹಣೆ ಕುರಿತು ಚರ್ಚಿಸಿದ್ದರು.

ಮಳೆಗಾಲದಲ್ಲಿ ಬೆಳೆಗಳಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲದ ಕಾರಣ ನಾಲೆಗಳಿಗೆ ನೀರು ಹರಿಸುವುದನ್ನು ನಿಯಂತ್ರಿಸಿದರೆ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು, ಕೈಗಾರಿಕೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀರಿನ ಕೊರತೆ ಎದುರಾಗುವುದನ್ನು ತಡೆಯಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಪ್ರಸ್ತುತ ಜಲಾಶಯದಲ್ಲಿ 172 ಅಡಿ ನೀರಿನ ಸಂಗ್ರಹವಿದ್ದು, ಮುಂದಿನ ದಿನಗಳ ಅಗತ್ಯವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದರು.

ರೈತರ ಬಗ್ಗೆ ಶಾಸಕರು ಹೊಂದಿರುವ ಕಾಳಜಿ ಮತ್ತು ದೂರದೃಷ್ಟಿಯ ಫಲವಾಗಿ ಜಲಾಶಯದಲ್ಲಿ ಪ್ರಸ್ತುತ ಅಗತ್ಯಕ್ಕೆ ತಕ್ಕಷ್ಟು ನೀರಿನ ಸಂಗ್ರಹವಿದೆ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಜಲಾಶಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚನ್ನಪ್ಪ, ಸಿ. ಜಯಪ್ಪ, ಕಲ್ಲಹಳ್ಳಿ ಶೇಖರ್, ಜುಂಜ್ಯಾನಾಯ್ಕ, ವಿಜಯಲಕ್ಷ್ಮೀ, ಕೃಷ್ಣಮೂರ್ತಿ, ಬಿ.ಎ. ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

[pj-news-ticker]