ಶಿವಮೊಗ್ಗ: ಉಡಾನ್ ಯೋಜನೆ ಮುಕ್ತಾಯವಾಗಿರುವುದರಿಂದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ವಿಮಾನ ಹಾರಾಟ ಇರುವುದಿಲ್ಲ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ಅಧ್ಯಕ್ಷ ನಂಜಯ್ಯನಮಠ್ ತಿಳಿಸಿದ್ದಾರೆ.
ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ.21ರಿಂದ ವಿಮಾನ ಹಾರಾಟ ನಿಲ್ಲಲಿದೆ. 2026ಕ್ಕೆ ಉಡಾನ್ ಯೋಜನೆ ಮುಗಿಯಲಿದೆ. ಅದನ್ನು ಮುಂದುವರೆಸುವಂತೆ ನಮ್ಮ ರಾಜ್ಯದ ಅಧಿಕಾರಿಗಳು ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ನಾನು ಸಹ ದೆಹಲಿಗೆ ಹೋಗಿ ವಿನಂತಿ ಮಾಡಿಕೊಂಡಿದ್ದೇನೆ.
ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪುನಃ ವಿಮಾನ ಪ್ರಾರಂಭವಾಗಬೇಕಾದರೆ ಅಂದಾಜು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ವಿಮಾನ ನಿಲ್ದಾಣವನ್ನು ಮತ್ತೆ ಸುಸ್ಥಿತಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ವಿಮಾನಯಾನ ಪ್ರಾರಂಭಿಸಲು ನಾನು ಸಂಸದ ರಾಘವೇಂದ್ರ ಅವರನ್ನು ಸಂಪರ್ಕ ಮಾಡಿದ್ದೇನೆ. ಅವರದೇ ಸರ್ಕಾರ ಕೇಂದ್ರದಲ್ಲಿ ಇರುವುದರಿಂದ ಈ ವಿಚಾರವನ್ನು ಅವರ ಪ್ರಯತ್ನಕ್ಕೆ ಬಿಡಲಾಗಿದೆ. ಉಡಾನ್ ಯೋಜನೆ ಜಾರಿ ಮಾಡಲು ವಿನಂತಿಸಿಕೊಂಡಿದ್ದೇನೆ ಎಂದು ಹೇಳಿದರು.
ಅಲ್ಲದೇ ನಮ್ಮ ಕೆಎಸ್ಐಐಡಿಸಿ ವತಿಯಿಂದ ಶಿವಮೊಗ್ಗದಿಂದ 13 ಮಾರ್ಗಗಳ ವಿಮಾನ ಹಾರಾಟಕ್ಕೆ ವಿನಂತಿಸಿಕೊಂಡಿದ್ದೇವೆ. ಶಿವಮೊಗ್ಗ- ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ, ಮುಂಬೈ, ಪುಣೆ, ಮೈಸೂರು, ಸೂರತ್, ಕೊಲ್ಲಾಪುರ, ಕೊಚ್ಚಿ, ಮಂಗಳೂರು, ಅಹಮದಾಬಾದ್, ಚೆನ್ನೈ ಸೇರಿದಂತೆ ಇತರೆ ಮಾರ್ಗಗಳಿಗೆ ಮನವಿ ಮಾಡಲಾಗಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳುಗಳ ವಿಮಾನ ಹಾರಾಟ ನಿಲ್ಲಿಸಿದರೂ ಸಹ 80 ಮಂದಿ ನೌಕರರನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಮೂರು ತಿಂಗಳುಗಳ ನಂತರ ಪುನಃ ವಿಮಾನಯಾನ ಪ್ರಾರಂಭವಾಗುವ ನಿರೀಕ್ಷೆ ಇದೆ.
ಇವರಿಗೆ ಪ್ರತಿ ತಿಂಗಳು 95 ಲಕ್ಷ ರೂ. ಸಂಬಳ ನೀಡಲಾಗುತ್ತದೆ. ಉಡಾನ್ ಯೋಜನೆಯಲ್ಲಿ ಶೇ.80ರಷ್ಟು ಕೇಂದ್ರ, ಶೇ.20ರಷ್ಟು ರಾಜ್ಯ ಸರ್ಕಾರ ನೀಡುತ್ತದೆ. ರಾಜ್ಯ ಸರ್ಕಾರದ ಆರ್ಥಿಕ ನೀತಿಗಳ ಅನುಗುಣವಾಗಿ ನಡೆಸಬೇಕಾಗುತ್ತದೆ ಎಂದು ನಂಜಯ್ಯನಮಠ್ ಸ್ಪಷ್ಟಪಡಿಸಿದರು.
