ಬೆಂಗಳೂರು: ನನ್ನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿರುವ ಎಡಿಜಿಪಿಗೆ ಕಾನೂನು ಪ್ರಕಾರವೇ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಆ ಅಧಿಕಾರಿ ನಾನು ಬೆದರಿಕೆ ಹಾಕಿದ್ದೇನೆ ಎಂದು ದೂರು ನೀಡಿದ್ದಾರೆ. ನಾನು ಎಲ್ಲಿ ಬೆದರಿಕೆ ಹಾಕಿದ್ದೇನೆ? ಅವರ ಬಗ್ಗೆ ಇರುವ ವಿಚಾರವನ್ನು ದಾಖಲೆ ಸಮೇತ ಹೇಳಿದ್ದೇನೆ. ಅದನ್ನು ಬೆದರಿಕೆ ಎಂದರೆ ಹೇಗೆ? ಕೇವಲ ರಾಜಕೀಯ ದುರುದ್ದೇಶದಿಂದ ದೂರು ನೀಡಿದ್ದಾರೆ. ನಾನೂ ಅದಕ್ಕೆಲ್ಲ ಹೆದರಲ್ಲ, ಅವರೂ ನನಗೆ ಹೆದರಬೇಕಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಾನು ಆ ಅಧಿಕಾರಿ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ್ದು ನಿಜ. ನಾನು ಏನು ಮಾತನಾಡಿದ್ದೇನೆ ಎನ್ನುವುದನ್ನು ಎಲ್ಲಾ ಮಾಧ್ಯಮಗಳು ವರದಿ ಮಾಡಿವೆ. ಆ ಮಾಧ್ಯಮಗೋಷ್ಠಿ ನಂತರ ಆ ಅಧಿಕಾರಿ ಸಹೋದ್ಯೋಗಿಗಳಿಗೆ ಬರೆದ ಪತ್ರದ ಬಗ್ಗೆಯೂ ಗೊತ್ತಿದೆ ಎಂದು ಸಚಿವರು ತಿಳಿಸಿದರು.
ಈ ವಿಷಯ ನ್ಯಾಯಾಲಯಕ್ಕೆ ಬರುತ್ತದೆ, ಅಲ್ಲಿ ಎದುರಿಸುತ್ತೇನೆ. ನಾನು ಎಲ್ಲಿಯೂ ಹೆದರಿ ಓಡುವ ವ್ಯಕ್ತಿ ನಾನಲ್ಲ. ಅವರೂ ನನಗೆ ಹೆದರಬೇಕಾಗಿಲ್ಲ. ನಾನೂ ಅವರಿಗೆ ಹೆದರಬೇಕಾಗಿಲ್ಲ. ನನ್ನ ವಿರುದ್ಧ 12 ವರ್ಷಗಳಿಂದ ಗಣಿಗಾರಿಕೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಯಾವಾಗ ಕರೆದರೂ ಹೋಗಿದ್ದೇನೆ. ಕೆಲ ದಿನಗಳ ಹಿಂದೆಯೂ ಹೋಗಿದ್ದೇನೆ. ಬರುವುದಿಲ್ಲ ಎಂದು ನಾನು ಹೇಳಿದ್ದೇನೆಯೇ ಎಂದು ಅವರು ಕೇಳಿದರು.
ಕೆಲವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಚಿತಾವಣೆ ಇದೆ. ನನ್ನ ವಿರುದ್ಧ ನೀಡಿರುವ ದೂರಿನಲ್ಲಿಯೂ ರಾಜಕೀಯ ದುರುದ್ದೇಶವಿದೆ. ಸರ್ಕಾರ ದೂರು ನೀಡಿರುವ ಅಧಿಕಾರಿಯನ್ನು ರಕ್ಷಿಸುತ್ತಿದೆ. ರಕ್ಷಿಸಲಿ, ನ್ಯಾಯಾಲಯ ಇದೆ, ಅಲ್ಲಿಯೇ ಎದುರಿಸುತ್ತೇನೆ. ನ್ಯಾಯಾಲಯದ ನನಗೆ ನಂಬಿಕೆ ಇದೆ ಎಂದು ಅವರು ಹೇಳಿದರು.