Breaking
Mon. Oct 14th, 2024

ಉಚಿತ ಬಸ್ ಪ್ರಯಾಣ ಟಿಕೆಟ್ ನ ಹಾರವನ್ನು ಸಿಎಂಗೆ ನೀಡಿದ ಹಾಸನದ ಕಾನೂನು ವಿದ್ಯಾರ್ಥಿನಿ!

By Mooka Nayaka News Apr 23, 2024
Spread the love

ಅರಸೀಕೆರೆ(ಹಾಸನ): ರಾಜ್ಯ ಸರ್ಕಾರದ 5 ಉಚಿತ ಭಾಗ್ಯಗಳ ಬಗ್ಗೆ ಹೊಗಳುವವರು-ತೆಗಳುವವರು ಇದ್ದಾರೆ. ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಿನ್ನೆ ಹಾಸನ ಜಿಲ್ಲೆಯ ಅರಸೀಕೆರೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ವಿದ್ಯಾರ್ಥಿನಿಯೊಬ್ಬಳು ಉಚಿತ ಬಸ್ ಟಿಕೆಟ್ ಗಳ ಮಾಲೆಯನ್ನು ಹಾಕಿ ತನ್ನ ಕೃತಜ್ಞತೆ ಮೆರೆದ ಅಪರೂಪದ ಘಟನೆ ನಡೆಯಿತು.

ಇದರಿಂದ ಖುಷಿಯಾದ ಸಿಎಂ ಸಿದ್ದರಾಮಯ್ಯನವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು ಬಹುಶ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ? ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿಎಂ ಕಡೆಗೆ ಓಡೋಡಿ ಬಂದ ಕಾನೂನು ವಿದ್ಯಾರ್ಥಿನಿ ಎಂ. ಜಯಶ್ರೀ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಗಳಲ್ಲಿಯೇ ಮಾಡಿಟ್ಟಿದ್ದ ಮಾಲೆಯನ್ನು ತಂದು ಹಾಕಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

‘ನೀವು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ಕಾನೂನು ವ್ಯಾಸಂಗವನ್ನು ಸುಗಮವಾಗಿ ನಡೆಸುವಂತಾಗಿದೆ. ಎಂದಾದರೂ ನೀವು ಸಿಕ್ಕರೆ ಮಾಲೆ ಮಾಡಿ ಹಾಕಬೇಕೆಂದು ಉಚಿತ ಟಿಕೆಟ್ ಗಳನ್ನು ಸಂಗ್ರಹಿಸಿಟ್ಟಿದೆ. ನೀವು ಇಲ್ಲಿ ಬರುವುದು ಗೊತ್ತಾಗಿ ಅವುಗಳನ್ನು ಮಾಲೆ ಕಟ್ಟಿ ತಂದೆ’’ ಎಂದು ವಿದ್ಯಾರ್ಥಿನಿ ಹೇಳಿದಳು ಎಂದು ಸಿಎಂ ಬರೆದುಕೊಂಡಿದ್ದಾರೆ.

ಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪ ಮಾಡುವ ದಾರಿ ತಪ್ಪಿದ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು’ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.

Related Post