Trending

ಭದ್ರಾವತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ : ತಾತ್ಸಾರ ಮನೋಭಾವ ತೊರೆದು ಕನ್ನಡಾಭಿಮಾನ ಬೆಳೆಸಿಕೊಳ್ಳಿ – ಡಾ. ಗಜಾನನ ಶರ್ಮ

Spread the love

ಭದ್ರಾವತಿ: ಕನ್ನಡ ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ನಮ್ಮಲ್ಲಿರುವ ತಾತ್ಸಾರ ಮನೋಭಾವದಿಂದ ಹೊರಬಂದು ಕನ್ನಡಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಸಾಧ್ಯ ಎಂದು ಬೆಂಗಳೂರಿನ ಸಾಹಿತಿ ಡಾ. ಗಜಾನನ ಶರ್ಮ ಕರೆ ನೀಡಿದರು.

ನಗರದ ನ್ಯೂಟೌನ್‌ನ ಮಹಾತ್ಮಗಾಂಧಿ ಉದ್ಯಾನವನದ ಮುಂಭಾಗದಲ್ಲಿರುವ ಶ್ರೀರಾಮ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಎಂದಿಗೂ ಅಳಿಯುವುದಿಲ್ಲ. ಅತ್ಯಂತ ಸಮೃದ್ಧ ಪರಂಪರೆ ಹೊಂದಿರುವ ಕನ್ನಡವನ್ನು ಮತ್ತಷ್ಟು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಇಂತಹ ಸಾಹಿತ್ಯ ಸಮ್ಮೇಳನಗಳು ನಮ್ಮನ್ನು ನಾವು ಅವಲೋಕಿಸಿಕೊಳ್ಳಲು, ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಪರಂಪರೆಯನ್ನು ಅರಿಯಲು ಹಾಗೂ ಭವಿಷ್ಯದ ಕುರಿತು ಚಿಂತಿಸಲು ಉತ್ತಮ ವೇದಿಕೆಯಾಗಿವೆ. ಸಮ್ಮೇಳನದ ಆಶಯಗಳನ್ನು ಅರ್ಥಮಾಡಿಕೊಂಡು ಅದನ್ನು ಸಾರ್ಥಕಗೊಳಿಸಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ವೈದ್ಯ ಸಾಹಿತಿ ಡಾ. ಕೃಷ್ಣ ಎಸ್. ಭಟ್ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವೈದ್ಯಕೀಯ ಸಾಹಿತ್ಯದ ಕೊಡುಗೆಯೂ ಮಹತ್ವದ್ದಾಗಿದೆ. ರಾಜ್ಯದಲ್ಲಿರುವ ಸುಮಾರು ಎರಡು ಲಕ್ಷ ವೈದ್ಯರಲ್ಲಿ 200ಕ್ಕೂ ಹೆಚ್ಚು ಮಂದಿ ವೈದ್ಯ ಬರಹಗಾರರಿದ್ದಾರೆ.

ತಮ್ಮ 50 ವರ್ಷಗಳ ವೃತ್ತಿಜೀವನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇನೆ. ವೈದ್ಯಕೀಯ ವಿಜ್ಞಾನ ನಿರಂತರವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕವೇ ಉತ್ತಮ ವೈದ್ಯರಾಗಲು ಸಾಧ್ಯ ಎಂದರು.

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿದೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ನಿಯಮಗಳನ್ನು ಮೊದಲಿನಿಂದಲೂ ಪಾಲಿಸುವುದು ಮುಖ್ಯ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿಗಳನ್ನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗೆ ತಮ್ಮದೇ ರಾಜ್ಯದಲ್ಲಿ ಉದ್ಯೋಗ ದೊರೆಯದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಸಂಗತಿ. ಕೇಂದ್ರ ಸರ್ಕಾರಿ ಸ್ವಾಮ್ಯದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದ್ದು, ಈ ಬಗ್ಗೆ ಕನ್ನಡಿಗರು ಜಾಗೃತರಾಗಬೇಕು ಎಂದರು.

ಬ್ಯಾಂಕ್‌ಗಳು ಹಾಗೂ ರೈಲ್ವೆ ಇಲಾಖೆಯಂತಹ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳ ಚಲನ್‌ಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ರಾಜ್ಯದ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು. ಶಾಲಾ ಶಿಕ್ಷಣದಲ್ಲಿ ಮಕ್ಕಳ ಸೃಜನಶೀಲತೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಸಾಂಸ್ಕೃತಿಕ ವೈಭವದ ಮೆರವಣಿಗೆ

ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಸಮ್ಮೇಳನಾಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ದಂಪತಿಯನ್ನು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಕನ್ನಡದ ರಥದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕರೆತರಲಾಯಿತು.

ಶಿಕ್ಷಕ ಹಾಗೂ ಜಾನಪದ ಕಲಾವಿದ ಎಂ.ಆರ್. ರೇಣುಪ್ಪ ನೇತೃತ್ವದ ಡೊಳ್ಳು ಕುಣಿತ ತಂಡ, ತಮಟೆ ಜಗದೀಶ್ ನೇತೃತ್ವದ ಕಲಾವಿದರ ತಂಡ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಹೋಬಳಿ ಘಟಕಗಳ ಅಧ್ಯಕ್ಷರಾದ ಎಚ್.ಬಿ. ಸಿದ್ದೋಜಿರಾವ್, ಎಚ್. ಸಿದ್ದಪ್ಪ, ಎಚ್.ಆರ್. ತೀರ್ಥಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

[pj-news-ticker]