ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆದು, ಅವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆಯಬಹುದು ಎಂಬ ಬಿಜೆಪಿ ನಾಯಕರ ನಿರೀಕ್ಷೆ ಹುಸಿಯಾಗಿದೆ.
ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿ ಉಳಿದಿರುವ ಕೆಎಸ್ ಈಶ್ವರಪ್ಪ ಅವರಿಗೆ ಚುನಾವಣಾ ಆಯೋಗ ಇಂದು ಚುನಾವಣಾ ಚಿಹ್ನೆ ನೀಡಿದೆ. ಕಬ್ಬಿನ ಜೊತೆ ಕೈ ಕಟ್ಟಿಕೊಂಡ ನಿಂತ ರೈತನ ಚಿಹ್ನೆಯನ್ನು ಈಶ್ವರಪ್ಪ ಅವರಿಗೆ ನೀಡಲಾಗಿದೆ.
ತಮ್ಮ ಪುತ್ರನಿಗೆ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ಸಮರ ಸಾರಿದ್ದರು. ಬಿವೈ ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಈಶ್ವರಪ್ಪ ಸೇರಿದಂತೆ 23 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ.
ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ. ರಾಘವೇಂದ್ರ, ಕಾಂಗ್ರೆಸ್ ನಿಂದ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರು ಸ್ಪರ್ಧಿಸಿದ್ದಾರೆ. ಇನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ. ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಬಹುಜನ ಸಮಾಜವಾದಿ ಪಾರ್ಟಿಯಿಂದ ಎ.ಡಿ. ಶಿವಪ್ಪ, ಯಂಗ್‍ಸ್ಟರ್ ಎಂಪರ್‍ಮೆಂಟ್ ಪಾರ್ಟಿಯಿಂದ ಯೂಸುಫ್ ಖಾನ್ ಕಣದಲ್ಲಿದ್ದಾರೆ.