Trending

ಗೋವಾದಲ್ಲಿ ಇನ್ಮುಂದೆ ರಾತ್ರಿ ಹೊತ್ತೂ ಶಾಪಿಂಗ್ ಧಮಾಕಾ – 24 ಗಂಟೆ ಅಂಗಡಿ ತೆರೆಯಲು ಅನುಮತಿ

Spread the love

ಪಣಜಿ: ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇನ್ಮುಂದೆ ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಹಾಗೂ ಮಾಲ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹೊಸ ನಿಯಮ ಮುಂದಿನ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ.

ಪ್ರವಾಸಿಗರು ಹಾಗೂ ಸ್ಥಳೀಯ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾಮಾನ್ಯ ವ್ಯಾಪಾರದ ಸಮಯದ ಮಿತಿಯನ್ನು ಸಡಿಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಗ್ರಾಹಕರು ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯಲ್ಲಿಯೂ ಅಂಗಡಿಗಳು ಮತ್ತು ಮಾಲ್‌ಗಳಲ್ಲಿ ಖರೀದಿ ಮಾಡಲು ಅವಕಾಶ ದೊರೆಯಲಿದೆ.

‘ಗೋವಾ ಅಂಗಡಿಗಳು ಮತ್ತು ಸಂಸ್ಥೆಗಳ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 2025’ರ ಅಡಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಮಂಗಳವಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಸರ್ಕಾರ ಹಿಂಪಡೆಯದ ಹೊರತು ಮೂರು ವರ್ಷಗಳವರೆಗೆ ಈ ವಿನಾಯಿತಿ ಮುಂದುವರಿಯಲಿದೆ.

ಕಾನೂನು ನಿಯಮ ಪಾಲನೆ ಕಡ್ಡಾಯ

24 ಗಂಟೆಗಳ ಕಾಲ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದ್ದರೂ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕಾಯ್ದೆಯಲ್ಲಿರುವ ಶಾಸನಬದ್ಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಉದ್ಯೋಗಿಗಳ ಸೇವಾ ಷರತ್ತುಗಳು ಸೇರಿದಂತೆ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ.

ಈ ನಿರ್ಧಾರದಿಂದ ಗೋವಾಕ್ಕೆ ಆಗಮಿಸುವ ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ರಾತ್ರಿ ವೇಳೆಯಲ್ಲಿಯೂ ಶಾಪಿಂಗ್ ಹಾಗೂ ಖರೀದಿ ಸೌಲಭ್ಯ ದೊರೆಯಲಿದ್ದು, ರಾಜ್ಯದ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.

[pj-news-ticker]