ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದ್ದು, ಸ್ಕೂಲ್ ಬಸ್ ಹರಿದು 1 ವರ್ಷದ 6 ತಿಂಗಳ ಮಗು ಸಾವನ್ನಪ್ಪಿದೆ. ಮೃತ ಮಗುವನ್ನು ಆರ್ಯನ್ ಎಂದು ಗುರುತಿಸಲಾಗಿದೆ.
ಗೋಪಾಲಗೌಡ ಬಡಾವಣೆಯ ‘ಎ’ ಬ್ಲಾಕ್ನ ಚಂದನ ಪಾರ್ಕ್ ಸಮೀಪ ಈ ದುರ್ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಮಂಜುನಾಥ್ ಅವರ ಪುತ್ರ ಆರ್ಯನ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಹೇಗಾಯಿತು ಘಟನೆ?
ಮನೆ ಕೆಲಸದಾಕೆ ಮಂಜುನಾಥ್ ಅವರ ಹಿರಿಯ ಮಗನನ್ನು ಸ್ಕೂಲ್ ಬಸ್ನಿಂದ ಕರೆದುಕೊಂಡು ಬರಲು ಹೋಗಿದ್ದ ವೇಳೆ, ಮನೆಯೊಳಗಿಂದ ಆರ್ಯನ್ ಹಿಂಬಾಲಿಸಿ ಓಡಿಕೊಂಡು ಬಂದಿದ್ದಾನೆ. ಇದೇ ವೇಳೆ ಬಸ್ ಮುಂಭಾಗಕ್ಕೆ ಬಂದ ಮಗುವಿನ ಮೇಲೆ ಚಾಲಕ ಗಮನಿಸದೇ ಬಸ್ ಹರಿದಿದೆ ಎನ್ನಲಾಗಿದೆ.
ತಕ್ಷಣದ ಕ್ರಮ
ಘಟನೆ ನಡೆದ ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆಯೇ ಆರ್ಯನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪ್ರಕರಣ ದಾಖಲು
ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
