ಬೆಂಗಳೂರು: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ದಿಢೀರ್ ಕುಸಿತ ಕಂಡಿದೆ.
ಕೆಲವೇ ದಿನಗಳ ಹಿಂದೆ ಕೆಜಿಗೆ ರೂ.80ರಿಂದ ರೂ.90ರವರೆಗೆ ಮಾರಾಟವಾಗುತ್ತಿದ್ದ ಅಕ್ಕಿ, ಈಗ ರೂ.65ರಿಂದ ರೂ.70ರ ದರದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಪ್ರತಿ ಕೆಜಿಗೆ ಸುಮಾರು ರೂ.10ರಿಂದ ರೂ.20ರವರೆಗೆ ಬೆಲೆ ಇಳಿಕೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಭತ್ತದ ಪೂರೈಕೆಯಲ್ಲಿ ಉಂಟಾಗಿದ್ದ ಕೊರತೆಯಿಂದಾಗಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ.
ಕಟಾವು ಕಾರ್ಯ ಪೂರ್ಣಗೊಂಡು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ತಲುಪುತ್ತಿರುವುದರಿಂದ ದರ ಇಳಿಕೆಯಾಗಿದೆ.
ಒಂದು ಕ್ವಿಂಟಲ್ ಅಕ್ಕಿಯ ಬೆಲೆ ಈ ಹಿಂದೆ ಸುಮಾರು ರೂ.8,500ರಷ್ಟಿತ್ತು. ಇದೀಗ ರೂ.6,500ಕ್ಕೆ ಇಳಿದಿದೆ. ಅಂದರೆ, ಕ್ವಿಂಟಲ್ಗೆ ಬರೋಬ್ಬರಿ ರೂ.2,000 ಕಡಿಮೆಯಾಗಿದೆ.
