ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ(86) ನಿಧನರಾಗಿದ್ದಾರೆ.
ಮೂಲತ ಕಾಸರಗೋಡಿನ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ ಪ್ರಾಧ್ಯಾಪಕರಾಗಿ ದುಡಿದವರು. ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು.ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ 22 ಜುಲೈ 1938ರಲ್ಲಿ ಜನನ. ತಂದೆ ಧೂಮಪ್ಪ ಗಟ್ಟಿ. ತಾಯಿ ಪರಮೇಶ್ವರಿ. ಕಾಸರಗೋಡಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳವಳಿಯಲ್ಲಿ ಬಾಗಿ. ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದರು.
ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದದ್ದು ಮಾಯಿಪ್ಪಾಡಿಯ ಸರ್ಕಾರಿ ಬೇಸಿಕ್ ಟ್ರೈನಿಂಗ್ ಶಾಲೆಯಿಂದ ಮತ್ತು ತಲಚೇರಿಯ ಸರ್ಕಾರಿ ಟ್ರೈನಿಂಗ್ ಕಾಲೇಜಿನಿಂದ ಒಂದು ವರ್ಷದ ಬಿಎಡ್ ಪದವಿ ಪಡೆದರು.ಕಾಸರಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಬಾಹ್ಯವಾಗಿ ಪಡೆದರು.
1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಯಲ್ಲಿ ಆರು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಭಾರತ ಸರ್ಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೊಮಾ ಮತ್ತು ಆಕ್ಸ್‌ಫರ್ಡಿನ ಕಾಲೇಜ್ ಆಫ್ ಪ್ರಿಸೆಪ್ಟರ್ಸ್‌ನಿಂದ ಡಿಪ್ಲೊಮಾ ಪಡೆದರು.
1957ರಿಂದ ಸಾಹಿತ್ಯ ಕೃಷಿ ಆರಂಭಿಸಿದರು.ಶಬ್ದಗಳು (1976), ಸೌಮ್ಯ (1978), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಮುಂತಾದ ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದ್ದರು.