Trending

ಮದ್ಯದ ಚಟ ಬಿಡಿಸಲು ನೀಡಿದ ‘ನಾಟಿ ಔಷಧಿ’ ಸೇವಿಸಿ ಜೀವ ಬಿಟ್ಟ ಇಬ್ಬರು : ಐವರ ಸ್ಥಿತಿ ಗಂಭೀರ

Spread the love

ಮಧ್ಯಪ್ರದೇಶ: ಮದ್ಯಪಾನ ಚಟವನ್ನು ಬಿಡಿಸುವುದಾಗಿ ನಂಬಿಸಿ ನೀಡಲಾದ ನಕಲಿ ಗಿಡಮೂಲಿಕೆ ಕಷಾಯವನ್ನು (ಹರ್ಬಲ್ ಮಿಶ್ರಣ) ಸೇವಿಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು, ಐವರು ಗಂಭೀರವಾಗಿ ಅಸ್ವಸ್ಥಗೊಂಡಿರುವ ದಾರುಣ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

ಅಸ್ವಸ್ಥಗೊಂಡ ಐವರನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ಔಷಧ ತಯಾರಿಸಲು ಬಳಸಲಾಗಿದ್ದ ದ್ರವ ಮತ್ತು ಸಸ್ಯದ ಬೇರಿನ ಪುಡಿಯನ್ನು ಜಪ್ತಿ ಮಾಡಿದ್ದಾರೆ.

ಈ ಪದಾರ್ಥದ ಸ್ವರೂಪ ಮತ್ತು ಅದರಲ್ಲಿರುವ ಅಂಶಗಳನ್ನು ಪತ್ತೆಹಚ್ಚಲು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಏನಿದು ಪ್ರಕರಣ:

ಮದ್ಯದ ಚಟ ಬಿಡಿಸಲು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಪಟಾಖೇಡಾ ಗ್ರಾಮದಲ್ಲಿ ಗಿಡಮೂಲಿಕೆಯ ಮದ್ದುಗಳನ್ನು ನೀಡಿ ಮದ್ಯವ್ಯಸನದಿಂದ ದೂರ ಮಾಡುತ್ತಾರೆ ಎಂದು ನಂಬಿದ್ದ ಏಳು ಮಂದಿ ಈ ಗ್ರಾಮಕ್ಕೆ ಬಂದಿದ್ದರು.

ಅದರಂತೆ ಬುಧವಾರ  ಅವರಿಗೆ ಗಾಜಿನ ಲೋಟಗಳಲ್ಲಿ ಕೆಂಪು ಬಣ್ಣದ ದ್ರವವನ್ನು ಕುಡಿಯಲು ನೀಡಿದ್ದಾರೆ,” ಈ ದ್ರವವನ್ನು ಸೇವಿಸಿದ ಬೆನ್ನಲ್ಲೇ ಇಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದು, ಉಳಿದ ಐವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.

ಮೃತರನ್ನು ರಾಮ್‌ಕಿಶೋರ್ ಝಾಡೆ (35) ಮತ್ತು ಸಂಜಯ್ ಉಯಿಕೆ (22) ಎಂದು ಗುರುತಿಸಲಾಗಿದೆ. ಸಸ್ಯದ ಬೇರನ್ನು ನೀರಿನಲ್ಲಿ ನೆನೆಸಿ ತಯಾರಿಸಿದ ಕೆಂಪು ಬಣ್ಣದ ದ್ರವವನ್ನು ಮದ್ಯಪಾನ ಬಿಡಿಸುವ ಔಷಧಿಯೆಂದು ನೀಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚು ಔಷಧ ಸೇವಿಸಿದ್ದೇ ಸಾವಿಗೆ ಕಾರಣವಾಯಿತೇ?

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಒಬ್ಬರಾದ ಮೋಹನ್ ಅಮೃತೇ ಮಾತನಾಡಿ, “ನಕಲಿ ಔಷಧಿ ಸೇವಿಸಲು ಹಲವರು ಅಲ್ಲಿ ಸೇರಿದ್ದರು. ಹೆಚ್ಚಿನವರು ತಲಾ ಒಂದು ಲೋಟ ದ್ರವವನ್ನು ಕುಡಿದರೆ, ಇಬ್ಬರು ವ್ಯಕ್ತಿಗಳು ತಲಾ ಎರಡು ಲೋಟ ಕುಡಿದಿದ್ದರು.

ಕುಡಿದ ಸ್ವಲ್ಪ ಸಮಯದಲ್ಲೇ ಎಲ್ಲರಿಗೂ ವಾಂತಿ ಶುರುವಾಯಿತು. ಹೆಚ್ಚು ಪ್ರಮಾಣದಲ್ಲಿ ಸೇವಿಸಿದ್ದ ಇಬ್ಬರು ಮೃತಪಟ್ಟಿದ್ದಾರೆ,” ಎಂದು ವಿವರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಸಾವು ಮತ್ತು ಅಸ್ವಸ್ಥತೆಗೆ ನಿಖರ ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ತಂಡಗಳನ್ನು ಅಲರ್ಟ್ ಮಾಡಲಾಗಿದ್ದು, ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿಐಜಿ ಬೀರೇಂದ್ರ ಕುಮಾರ್ ಸಿಂಗ್ ಮತ್ತು ಎಸ್‌ಪಿ ಅಮಿತ್ ಸಕ್ಸೇನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

[pj-news-ticker]