ಶಿವಮೊಗ್ಗ: ರಾಜ್ಯ ಮಟ್ಟದ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ಫೆ. 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಎರಡು ಲಕ್ಷ ನೌಕರರು ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಮ್ಮ ಮೂರು ಬೇಡಿಕೆಯನ್ನು ಮುಂದಿಡುತ್ತೇವೆ. ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, 7ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು, ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡಬೇಕು. ಈ ಮೂರು ಬೇಡಿಕೆ ಈಡೇರಿಕೆಗಾಗಿ ನಮ್ಮ ಸಮ್ಮೇಳನ ಮಾಡುತ್ತಿದ್ದೇವೆ. ಸಮ್ಮೇಳನದಲ್ಲಿ ನಮ್ಮ ಬೇಡಿಕೆ ಬಗ್ಗೆ ಸಿಎಂ ಭರವಸೆ ನೀಡುತ್ತಾರೆ ಎನ್ನುವ ಭರವಸೆಯಿದೆ ಎಂದರು.
ಸಮ್ಮೇಳನದಲ್ಲಿ ಸಂಘಟನೆ ಶಕ್ತಿ ತೋರಿಸಲಾಗುತ್ತದೆ. ಸಮ್ಮೇಳನಕ್ಕೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹಳೇ ಪಿಂಚಣಿ ಜಾರಿಗೆ ತರುತ್ತೇವೆ ಎಂದಿದ್ದಾರೆ. ಸರ್ಕಾರ ಸಮಯ ಕೇಳಿದೆ ಹಾಗಾಗಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಷಡಕ್ಷರಿ ಹೇಳಿದರು.