ಶಿವಮೊಗ್ಗ: ಪಕ್ಷಕ್ಕಾಗಿ ಕತ್ತೆ ತರ ದುಡಿಯುತ್ತಿದ್ದೇನೆ. ಅವಕಾಶ ಕೊಟ್ಟರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರಿಗೆ ದುರ್ಬುದ್ಧಿ ಜಾಸ್ತಿ. ರಾಮನನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಮಾವೇಶಗಳು ಪ್ರಚಾರದ ಒಂದು ಭಾಗ. ಗ್ಯಾರಂಟಿ ಇಟ್ಟುಕೊಂಡು ಮತ ಕೇಳುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಕಮಿಷನ್ ತಿನ್ನುತ್ತಿದ್ದಾರೆ ಅಂತಾರೆ. ವಿಪಕ್ಷದವರು ಕಂಡಮ್ ಮಾಡಿದರೆ, ಅವರೇ ಕಂಡಮ್ ಆಗ್ತಾರೆ. ಜನರೇ ಬಂದು ನಮಗೆ ಯೋಜನೆ ತಲುಪುತ್ತಿದೆ ಅನ್ನುತ್ತಿದ್ದಾರೆ.
ಪಕ್ಷ, ಜಾತಿ, ಧರ್ಮ ನೋಡಿ ಯೋಜನೆ ಕೊಡಲ್ಲ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಕೋಡಬೇಕಂತೆ. ಮುಸ್ಲಿಮರು, ಬಡವರು ತೆರಿಗೆ ಕಟ್ಟಿಲ್ವ. ನಾವೆಲ್ಲ ಭಾರತಾಂಬೆಯ ಮಕ್ಕಳು. ವಿಪಕ್ಷದವರಿಗೆ ಜನರು ಉತ್ತರ ಕೊಡುತ್ತಾರೆ. ಧೈರ್ಯವಾಗಿ ಜನರ ಬಳಿ ಬಂದು ಆಶೀರ್ವಾದ ಕೇಳುತ್ತೇವೆ.
ಗ್ಯಾರಂಟಿ ಕಾರ್ಯಕ್ರಮಕ್ಕೆ ವಿಪಕ್ಷದವರು ಬರಬೇಕಿತ್ತು. ಇದು ಪಕ್ಷದ ಕಾರ್ಯಕ್ರಮ ಅಲ್ಲ. ಸರ್ಕಾರದ ಕಾರ್ಯಕ್ರಮ. ಅಧಿಕಾರಕ್ಕಾಗಿ, ಚುನಾವಣೆಗಾಗಿ ಈ ಸಮಾವೇಶ ಅಲ್ಲ ಎಂದರು.