ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ಸಂಘರ್ಷ ತಾರಕಕ್ಕೇರಿದ್ದು, ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಸುರಕ್ಷಿತ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಬಾಂಗ್ಲಾದೇಶದಲ್ಲಿ ಸರ್ಕಾರ ವಿರೋಧಿ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದು, ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ದೇಶದಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿರುವಂತೆಯೇ ಪರಿಸ್ಥಿತಿ ಕೈ ಮೀರುವ ಮುನ್ಸೂಚನೆ ಪಡೆದ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದೇಶದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೆಲಿಕಾಪ್ಟರ್‌ನಲ್ಲಿ ತಮ್ಮ ಸಹೋದರಿಯೊಂದಿಗೆ ಭಾರತಕ್ಕೆ ಪರಾರಿಯಾಗಿದ್ದು, ಸೇನಾ ವಿಮಾನ ಹಾರಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಶೇಖ್ ಹಸೀನಾ ಪ್ಯಾಲೆಸ್ ಗೆ ನುಗ್ಗಿದ ಪ್ರತಿಭಟನಾಕಾರರು
ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ತಾರಕಕ್ಕೇರಿದ್ದು, ಪ್ರತಿಭಟನಾ ನಿರತರು ನೇರವಾಗಿ ಬಾಂಗ್ಲಾದೇಶ ಪ್ರಧಾನಿಗಳ ಪ್ಯಾಲೆಸ್ ಗೇ ನುಗ್ಗಿದ್ದಾರೆ. ಮತ್ತೊಂದೆಡೆ ಪ್ರತಿಭಟನಾಕಾರರು ನುಗ್ಗುವ ಮುನ್ನವೇ ಅಪಾಯದ ಮುನ್ಸೂಚನೆ ಪಡೆದ ಶೇಖ್ ಹಸೀನಾ ಸೇನಾ ವಿಮಾನದಲ್ಲಿ ದೇಶ ತೊರೆದಿದ್ದಾರೆ.
ಭಾರತದಲ್ಲಿ ಶೇಖ್ ಹಸೀನಾ
ಮೂಲಗಳ ಪ್ರಕಾರ ಬಾಂಗ್ಲಾದೇಶ ತೊರೆದಿದ್ದ ಶೇಖ್ ಹಸೀನಾ ಇದೀಗ ತ್ರಿಪುರಾದ ಅಗರ್ತಲಾದಲ್ಲಿ ಇಳಿದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹೆಲಿಕಾಪ್ಟರ್ ಇಳಿದ ವಿಡಿಯೋವೊಂದು ಕೂಡ ವೈರಲ್ ಆಗುತ್ತಿದೆ. ಘರ್ಷಣೆಯ ತೀವ್ರವಾದ ಬೆನ್ನಲ್ಲಿಯೇ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತ ಮಾಡಲಾಗಿದೆ.
ಅನಿರ್ದಿಷ್ಟ ಅವಧಿಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಹೇರುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಾಂಗ್ಲಾದೇಶ ರೈಲ್ವೆ ಎಲ್ಲಾ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ದೇಶದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಬಾಂಗ್ಲಾದೇಶ ಆಡಳಿತವು ಇಂದಿನಿಂದ ಮೂರು ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಿದೆ.