Trending

ಶಿವಮೊಗ್ಗದಲ್ಲಿ ಚಲಿಸುವ ರೈಲಿನಿಂದ ವಿದ್ಯಾರ್ಥಿನಿ ಜಿಗಿತ : ಕೂದಲೆಳೆ ಅಂತರದಲ್ಲಿ ಪಾರು!

Spread the love

ಶಿವಮೊಗ್ಗ: ಪರೀಕ್ಷೆ ಬರೆಯಲು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನಿದ್ರೆಯಲ್ಲಿದ್ದ ಕಾರಣ ರೈಲ್ವೆ ನಿಲ್ದಾಣದಲ್ಲಿ ಇಳಿಯದೆ ಮುಂದೆ ಪ್ರಯಾಣಿಸಿದ್ದು, ಬಳಿಕ ಎಚ್ಚರಗೊಂಡು ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಹಾರಿರುವ ಘಟನೆ ನಡೆದಿದೆ. ಅದೃಷ್ಟವಶಾತ್, ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ವಿದ್ಯಾರ್ಥಿನಿ ಸುರಕ್ಷಿತವಾಗಿ ಪಾರಾಗಿದ್ದಾರೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಕ್ಕ ಪಡೆ ಸಿಬ್ಬಂದಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಪರೀಕ್ಷೆ ಬರೆಯುವ ಉದ್ದೇಶದಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ರೈಲಿನಲ್ಲಿ ನಿದ್ರೆಗೆ ಜಾರಿದ್ದರು. ಹೀಗಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣ ಬಂದರೂ ಅವರಿಗೆ ಎಚ್ಚರವಾಗಿರಲಿಲ್ಲ. ಪರಿಣಾಮವಾಗಿ ರೈಲು ನಿಲ್ದಾಣ ದಾಟಿ ಮುಂದೆ ಸಾಗಿತ್ತು.

ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ವಿದ್ಯಾರ್ಥಿನಿಗೆ ತಾನು ಇಳಿಯಬೇಕಿದ್ದ ನಿಲ್ದಾಣವನ್ನು ದಾಟಿರುವುದು ತಿಳಿದುಬಂದಿದೆ. ಗಾಬರಿಗೊಂಡ ಅವರು ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಹಾರಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪಡೆಯ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ರಕ್ಷಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆಯ ಮೊಬೈಲ್ ಫೋನ್ ರೈಲಿನಲ್ಲಿಯೇ ಉಳಿದುಕೊಂಡಿರುವುದು ತಿಳಿದುಬಂದಿದೆ.

ಬಳಿಕ ಅಕ್ಕ ಪಡೆಯ ಸಿಬ್ಬಂದಿ ವಿದ್ಯಾರ್ಥಿನಿಯ ಸಂಬಂಧಿಕರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ಅವರ ಸಂಬಂಧಿಕರೊಂದಿಗೆ ಕಳುಹಿಸಿಕೊಡಲಾಗಿದೆ.

ರೈಲ್ವೆ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

[pj-news-ticker]