Trending

₹58 ಲಕ್ಷ ದರೋಡೆ ಪ್ರಕರಣ ಭೇದಿಸಿದ ಕಡೂರು ಪೊಲೀಸರು : ಭದ್ರಾವತಿಯಲ್ಲಿ ಐವರು ಆರೋಪಿಗಳ ಬಂಧನ

Spread the love

ಕಡೂರು: ಅಡಿಕೆ ವ್ಯಾಪಾರಿಯ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದ ಪ್ರಕರಣವನ್ನು ಕಡೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ತಲೆಮರೆಸಿಕೊಂಡಿದ್ದ ಐವರನ್ನು ಬಂಧಿಸಿ, ₹30 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ. ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬೀರೂರು ಮೂಲದ ಅಡಿಕೆ ವ್ಯಾಪಾರಿ ತೌಫಿಕ್ ಅವರು ನವೆಂಬರ್ 7ರಂದು ಬೆಂಗಳೂರಿನಿಂದ ತಮ್ಮ ಫಾರ್ಚುನರ್ ಕಾರಿನಲ್ಲಿ ವಾಪಸ್ ಬರುತ್ತಿದ್ದರು. ಮಧ್ಯರಾತ್ರಿ ಕಡೂರು ಪಟ್ಟಣದ ಹೊರವಲಯದಲ್ಲಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಅದರಲ್ಲಿದ್ದ ₹58 ಲಕ್ಷ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಈ ಘಟನೆಯಿಂದ ವ್ಯಾಪಾರಿ ಬೆಚ್ಚಿಬಿದ್ದಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಈ ವೇಳೆ ವ್ಯಾಪಾರಿಯ ಬಳಿ ಹಿಂದೆ ಕೆಲಸ ಮಾಡುತ್ತಿದ್ದ ಇರ್ಫಾನ್ ಎಂಬಾತನ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ವ್ಯಾಪಾರಿಯ ಹಣಕಾಸಿನ ವ್ಯವಹಾರ, ಹಣ ಸಾಗಿಸುವ ಮಾರ್ಗ ಹಾಗೂ ಪ್ರಯಾಣದ ವಿವರಗಳನ್ನು ತಿಳಿದಿದ್ದ ಆತ ದರೋಡೆಗೆ ಯೋಜನೆ ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

ತನಿಖೆ ಮುಂದುವರಿಸಿದ ಪೊಲೀಸರಿಗೆ ಆರೋಪಿಗಳು ಭದ್ರಾವತಿಯಲ್ಲಿ ಆಶ್ರಯ ಪಡೆದಿರುವ ಸುಳಿವು ಸಿಕ್ಕಿದೆ. ಕೂಡಲೇ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಲಾಗಿದೆ.

ಬಂಧಿತರಿಂದ ₹30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ಎಲ್ಲಿದೆ ಮತ್ತು ದರೋಡೆಗೆ ಸಹಕರಿಸಿದ ಇತರ ಮೂವರು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದಯಾಮ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯರಾಮ್ ಹಾಗೂ ಡಿವೈಎಸ್ಪಿ ಪರಶುರಾಮಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ಕಡೂರು–ಬೀರೂರು ವೃತ್ತ ನಿರೀಕ್ಷಕ ಮಧು, ಪಿಎಸ್‌ಐಗಳಾದ ಸಜಿತ್ ಕುಮಾರ್, ಧನಂಜಯ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

[pj-news-ticker]