Trending

ಸಿಐಟಿಯು ನೇತೃತ್ವದಲ್ಲಿ ಡಿ. 1 ರಿಂದ ಕಾರ್ಮಿಕರ ದೆಹಲಿ ಚಲೋ

Spread the love

ಶಿವಮೊಗ್ಗ: ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಡಿಸೆಂಬರ್ 1ರಿಂದ 3ರವರೆಗೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಎಂ. ನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕರ ನಡೆ ಸಂಸತ್ತಿನ ಕಡೆ’ ಘೋಷಣೆಯೊಂದಿಗೆ ನಡೆಯುವ ಹೋರಾಟದಲ್ಲಿ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ 120 ಮಂದಿ ಹಾಗೂ ರಾಜ್ಯದಿಂದ 6,700 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಎಲ್ಲ ಕಾರ್ಮಿಕರಿಗೆ ₹42 ಸಾವಿರ ಕನಿಷ್ಠ ವೇತನ ಹಾಗೂ ₹21 ಸಾವಿರ ಸಾರ್ವತ್ರಿಕ ಕನಿಷ್ಠ ಪಿಂಚಣಿ ನೀಡಬೇಕು. ಸ್ಕೀಂ ನೌಕರರನ್ನು ಕಾರ್ಮಿಕರೆಂದು ಗುರುತಿಸಿ ಶಾಸನಬದ್ಧ ಸೌಲಭ್ಯ ಕಲ್ಪಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಸಂಘಟನೆಗಳ ಹೋರಾಟಗಳನ್ನು ಅಪರಾಧೀಕರಿಸುವುದನ್ನು ನಿಲ್ಲಿಸಬೇಕು. ನೈಸರ್ಗಿಕ ಸಂಪನ್ಮೂಲ ಮತ್ತು ಜನರ ಹಕ್ಕುಗಳನ್ನು ರಕ್ಷಿಸಬೇಕು. ಭೂಸ್ವಾಧೀನದಿಂದ ಸ್ಥಳಾಂತರಗೊಳ್ಳುವವರಿಗೆ ಪುನರ್ವಸತಿ ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಹನುಮಕ್ಕ ಮಾತನಾಡಿ, ಕ್ಲಸ್ಟರ್ ಕಿಚನ್ ಯೋಜನೆ ವಿರೋಧಿಸಿ ನವೆಂಬರ್ 25ರಿಂದ ರಾಜ್ಯದ 28 ಜಿಲ್ಲೆಗಳಲ್ಲಿ ಬಿಸಿಯೂಟ ನೌಕರರು ಅಡುಗೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಶಾಲೆಗಳಲ್ಲಿಯೇ ಹಿಂದಿನಂತೆ ಅಡುಗೆ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷೆ ಚಂದ್ರಮ್ಮ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಸಹ ಸಂಚಾಲಕ ಷಣ್ಮುಖಪ್ಪ ಇದ್ದರು.

[pj-news-ticker]