Trending

ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ – ಮಾಜಿ ಪ್ರಧಾನಿ; ಇದೇನು ಕಡಲೆ ಗಿಡ ಅಲ್ಲ: ಡಿಕೆಶಿ ತಿರುಗೇಟು

Spread the love

ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಈ ಸರ್ಕಾರವನ್ನು ತೆಗೆದುಹಾಕುವವರೆಗೂ ವಿರಮಿಸುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಇಂದು ಚನ್ನಪಟ್ಟಣ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಈ ಸರ್ಕಾರದ ಬಗ್ಗೆ ನಾನು ಯಾವಾಗಲೂ ಮಾತಾಡಿರಲಿಲ್ಲ. ಇವರ ಲೂಟಿ ನೋಡಲಾರದೆ ನಿನ್ನೆಯಿಂದ ಮಾತನಾಡುತ್ತಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನಾಯಕತ್ವವನ್ನು ಶ್ಲಾಘಿಸಿದ ಮಾಜಿ ಪ್ರಧಾನಿ, ಇಂಡಿಯಾ ಮೈತ್ರಿಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೊನೆಯ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿ ಹೋರಾಡುತ್ತೇನೆ ಎಂದು ಹೇಳಿದರು.

ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಚುನಾವಣಾ ಕಣಕ್ಕಿಳಿದಿರುವ ಕಾರಣ ಇಳಿ ವಯಸ್ಸಿನಲ್ಲೂ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವುದು ತಪ್ಪು. ನಾನು ಮುಂದಿನ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಹೋರಾಟ ಮಾಡುತ್ತೇನೆ ಎಂದರು.

ಈ ಸರ್ಕಾರ ತೊಲಗುವವರೆಗೆ ಹೋರಾಟ ಮಾಡುತ್ತೇನೆ… ನನ್ನ ವಯಸ್ಸು 92. ನನ್ನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆದ್ದ ನಂತರ ನಾನು ಮನೆಯಲ್ಲಿ ಮಲಗುತ್ತೇನೆ ಎಂದಲ್ಲ. ಇಲ್ಲ ನನ್ನ 62 ವರ್ಷಗಳಲ್ಲಿ ಇಂತಹ ಸರ್ಕಾರವನ್ನು ನಾನು ನೋಡಿಲ್ಲ. ನಾವು ಈ ರಾಜ್ಯವನ್ನು ಉಳಿಸಬೇಕಾಗಿದೆ. ನಾನು ಈ ಸರ್ಕಾರ ತೆಗೆಯಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ” ಎಂದು ಮಾಜಿ ಪ್ರಧಾನಿ ಹೇಳಿದರು.

ಇನ್ನು ರಾಮನಗರದಲ್ಲಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾಜಿ ಸಿಎಂ, ಮಾಜಿ ಪ್ರಧಾನಿ ಪುತ್ರ, ನಾನು ಬಡ ರೈತನ ಮಗ, ನನ್ನ ಮತ್ತು ಕುಮಾರಸ್ವಾಮಿ ನಡುವೆ ಹೋಲಿಕೆ ಸಾಧ್ಯವಿಲ್ಲ. “ಅವರು (ಕುಮಾರಸ್ವಾಮಿ) ಹಿಮಾಲಯ, ನಾನು ಜನರ ಪ್ರಾಮಾಣಿಕ ಸೈನಿಕ” ಎಂದು ಹೇಳಿದರು.

ಸರ್ಕಾರವನ್ನು ತೆಗೆದುಹಾಕುವ ಕುರಿತ ದೇವೇಗೌಡರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್”…. ಇದು ಸುಲಭವಾಗಿ ತೆಗೆಯುವ ಕಡಲೆ ಗಿಡವಲ್ಲ…. ಇದು 136 ಶಾಸಕರ ಬಲಿಷ್ಠ ಸರ್ಕಾರವಾಗಿದೆ. ಇದು ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದೆ” ಎಂದು ತಿರುಗೇಟು ನೀಡಿದರು.

[pj-news-ticker]