Breaking
Mon. Jun 17th, 2024

ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಸೇರಿ 10 ಮಂದಿ ಬಂಧನ : ಏನಿದು ಪ್ರಕರಣ..?

By Mooka Nayaka News Jun 11, 2024
Spread the love

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಪೊಲೀಸರು ದರ್ಶನ್‌ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಕೊಲೆ ಪ್ರಕರಣದಲ್ಲಿ ಮೈಸೂರಿನ ಫಾರ್ಮ್ಹೌಸ್ನಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ನಟ ದರ್ಶನ್‌ ಅವರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದರ್ಶನ್‌ ಸೇರಿದಂತೆ 10 ಮಂದಿಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.

ಏನಿದು ಪ್ರಕರಣ?: ನಟ ದರ್ಶನ್‌ ಅವರಿಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ  ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್‌ ಮಾಡುತ್ತಿದ್ದ. ಇದಲ್ಲದೆ ಕೆಟ್ಟದಾಗಿ ಮೆಸೇಜ್‌ ಮಾಡುತ್ತಿದ್ದ ಎನ್ನಲಾಗಿದೆ.

ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು  ಬೆಂಗಳೂರಿಗೆ ಕರೆಯಲಾಗಿತ್ತು. ಜೂ. 8ರಂದು ರಾತ್ರಿ ವಿನಯ್‌ ಎನ್ನುವವರ ಶೆಡ್‌ ಗೆ ಕರೆತಂದು ಬಲವಾಧ ಆಯುಧದಿಂದ ರೇಣುಕಾ ಅವರಿಗೆ ಹೊಡೆದು ಕೊಲೆಗೈದು, ಮೃತದೇಹನ್ನು ಮೋರಿಗೆ ಎಸೆಯಲಾಗಿತ್ತು. ಜೂ. 9ರಂದು ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್‌ ಮೆಂಟ್‌ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದರ್ಶನ್‌  ಸೇರಿದಂತೆ ನಾಲ್ವರು ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆ ಸಂದರ್ಭದಲ್ಲಿ ದರ್ಶನ್‌ ಅವರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.

ಪೊಲೀಸರಿಗೆ ಮೃತದೇಹ ಸಿಕ್ಕಾಗ ತನಿಖೆ ಶುರುವಾಗಿದೆ. ಈ ಪ್ರಕರಣದಲ್ಲಿ ಮೂವರು ಮೊದಲು ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದು, ಹಣಕಾಸಿನ ವಿಚಾರದಲ್ಲಿ ಈ ಕೊಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರಿಗೆ ಈ ಬಗ್ಗೆ ಸಂಶಯ ಉಂಟಾಗಿದೆ. ಮತ್ತಷ್ಟು ಆಳವಾಗಿ ತನಿಖೆಗೆ ಇಳಿದಾಗ ಘಟನೆ ಹಿಂದಿನ ಕಾರಣ ತಿಳಿದು ಬಂದಿದೆ.

ಬೆಂಗಳೂರಿನ ಶೆಡ್‌ ವೊಂದರಲ್ಲಿ ರೇಣುಕಾ ಸ್ವಾಮಿ ಅವರ ಕೊಲೆಯಾಗಿತ್ತು. ಮೊದಲಿಗೆ ಇದೊಂದು ಆತ್ಮಹತ್ಯೆ ಪ್ರಕರಣವೆನ್ನಲಾಗಿತ್ತು. ಆದರೆ ತನಿಖೆಯ ಬಳಿಕ ಇದೊಂದು ಕೊಲೆ ಎನ್ನುವುದು ಗೊತ್ತಾಗಿದೆ. ದರ್ಶನ್‌ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿರುವುದಾಗಿ ತಿಳಿದು ಬಂದಿದೆ.

ಸದ್ಯ ದರ್ಶನ್‌ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ. ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Post