ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಖಚಿತವಾಗುತ್ತಿರುವಂತೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.
ಇಂದು ಮೈಸೂರಿಗೆ ಬಂದ ಬಿ ವೈ ವಿಜಯೇಂದ್ರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ರಾಜ್ಯನಾಯಕರು ಏನೇ ಶಿಫಾರಸು ಮಾಡಿದರೂ ಹೈಕಮಾಂಡ್ ತೀರ್ಮಾನವೇ ಅಂತಿಮ, ಹೈಕಮಾಂಡ್ ಎಲ್ಲಿ ಹೇಳುತ್ತದೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದರು.
ರಾಜ್ಯದ ಜನತೆ ವರುಣಾ ಕ್ಷೇತ್ರದ ಮೂಲಕ ನನ್ನನ್ನು ಗುರುತಿಸುತ್ತಿದ್ದರೆ, ಶಿಕಾರಿಪುರ ಕ್ಷೇತ್ರದ ಜನತೆ ತಂದೆಯ ಮೂಲಕ ನನಗೆ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಈಗಾಗಲೇ ಶಿಕಾರಿಪುರ ತಾಲ್ಲೂಕಿನ ಗ್ರಾಮಗಳಲ್ಲಿ ಒಂದು ಸುತ್ತಿನ ಓಡಾಟ ನಡೆಸಿದ್ದು, ಇನ್ನೆರಡು ಮೂರು ದಿನಗಳಲ್ಲಿ ಮತ್ತೊಂದು ಸುತ್ತಿನ ಸಂಚಾರ ನಡೆಸುತ್ತೇನೆ ಎಂದು ಇಂದು ಮಧ್ಯಾಹ್ನ ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಮಗ ವಿಜಯೇಂದ್ರರ ಹೇಳಿಕೆ ಹೊರಬರುತ್ತಲೇ ಬೆಂಗಳೂರಿನಲ್ಲಿ ಇಂದು ಮೈಸೂರಿಗೆ ಹೊರಡುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ ಸಂಪೂರ್ಣ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ವಿಜಯೇಂದ್ರಗೆ ಒತ್ತಡ ಇರುವುದು ಹೌದು, ಆದರೆ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸುವುದಿಲ್ಲ, ಶಿಕಾರಿಪುರದಿಂದಲೇ ಸ್ಪರ್ಧಿಸಬೇಕು, ನನ್ನ ಕ್ಷೇತ್ರದಲ್ಲಿಯೇ ನಿಂತುಕೊಳ್ಳಬೇಕೆಂದು ಹೈಕಮಾಂಡ್ ಗೆ ನಾನು ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಹಲವರ ಒತ್ತಡವಿದ್ದರೂ ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಈ ಹಿಂದೆಯೇ ಹೇಳಿದ್ದೆ. ಯಾವುದೇ ಕಾರಣಕ್ಕೂ ವರುಣಾಕ್ಕೆ ಹೋಗುವ ಪ್ರಶ್ನೆಯಿಲ್ಲ. ಶಿಕಾರಿಪುರ ಸ್ರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಗೂ ತಿಳಿಸುತ್ತೇನೆ, ವಿಜಯೇಂದ್ರಗೂ ತಿಳಿಸುತ್ತೇನೆ ಎಂದರು.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸಹ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.