ನವದೆಹಲಿ: ಖ್ಯಾತ ನಿರ್ದೇಶಕ ರಮಾನಂದ ಸಾಗರ್ ನಿರ್ದೇಶನದ ಪೌರಾಣಿಕ ಧಾರಾವಾಹಿ ‘ರಾಮಾಯಣ’ ಮತ್ತೊಮ್ಮೆ ಪ್ರಸಾರವಾಗುತ್ತಿದ್ದು, ದೂರದರ್ಶನ ವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರ ಆರಂಭವಾಗುತ್ತಿದೆ.
ಹೌದು.. ಮೂರು ದಶಕಗಳ ಹಿಂದೆ ಪ್ರಸಾರವಾಗಿ ದೇಶಾದ್ಯಂತ ಜನರ ಮನ್ನಣೆ ಗಳಿಸಿ ಇಂದಿಗೂ ಹಸಿರಾಗಿರುವ ರಮಾನಂದ ಸಾಗರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರುವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ. ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುವುದಾಗಿ ಹೇಳಿದೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ದೂರದರ್ಶನ, ‘ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ… ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ರಾಮಾಯಣ’ ಬರಲಿದೆ ಎಂದು ತಿಳಿಸಿದೆ.80 ಮತ್ತು 90 ರ ದಶಕದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ, ಶ್ರೀರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ಕಾಣಿಸಿಕೊಂಡಿದ್ದರು.
2ನೇ ಬಾರಿ ಮರು ಪ್ರಸಾರ
ರಾಮಾಯಣ ಧಾರಾವಾಹಿ 2ನೇ ಬಾರಿಗೆ ಮರು ಪ್ರಸಾರವಾಗುತ್ತಿದ್ದು, ಈ ಹಿಂದೆ ಕೊರೊನಾ ಲಾಕ್‌ಡೌನ್ ವೇಳೆಯೂ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಲೂ ಲಕ್ಷಾಂತರ ಜನರು ವೀಕ್ಷಿಸಿದ್ದರು.