ಭದ್ರಾವತಿ : ನಗರದ ಹಳೆ ನಗರ ಸಂತೆ ಮೈದಾನದ ಸಮೀಪದ ನಿವಾಸಿಗಳಾಗಿದ್ದ ವೃದ್ದ ದಂಪತಿಗಳು ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಚಂದ್ರಪ್ಪ ಹಾಗೂ ಜಯಮ್ಮ ಎಂದು ಗುರುತಿಸಲಾಗಿದೆ. ವಿಐಎಸ್ಎಲ್ನ ನಿವೃತ್ತ ಉದ್ಯೋಗಿಯಾಗಿದ್ದ ಚಂದ್ರಪ್ಪ ಅವರು ಪತ್ನಿಯೊಂದಿಗೆ ಮನೆಯಲ್ಲಿ ಮಾತ್ರ ವಾಸವಿದ್ದರು. ಇವರಿಗೆ ಮೂವರು ಪುತ್ರರಿದ್ದು, ಮಕ್ಕಳೆಲ್ಲರೂ ಬೇರೆ ಊರುಗಳಲ್ಲಿ ನೆಲೆಸಿದ್ದಾರೆ.
ಇಂದು ಬೆಳಿಗ್ಗೆ ದಂಪತಿಗಳು ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ವಿಷಯ ತಿಳಿದ ಕೂಡಲೇ ಸ್ಥಳೀಯ ನಗರಸಭಾ ಸದಸ್ಯೆ ಅನುಸೂಯ ಮೋಹನ್ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತರ ಪುತ್ರರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಶಿವಮೊಗ್ಗದಿಂದ ವಿಶೇಷ ತನಿಖಾ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಸಾವಿಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.
ಘಟನೆ ತಿಳಿಯುತ್ತಿದ್ದಂತೆ ನೆರೆಹೊರೆಯವರು ಹಾಗೂ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ವೃದ್ದ ದಂಪತಿಗಳ ಸಾವಿನ ಕುರಿತು ಚರ್ಚೆ ನಡೆಯುತ್ತಿದೆ. ಈ ಘಟನೆಯಿಂದ ಬಡಾವಣೆಯ ಜನತೆ ಭಯಭೀತರಾಗಿದ್ದಾರೆ.
