ಶಿವಮೊಗ್ಗ : ಲಕ್ಷ್ಮಣ ಸವದಿ ಶ್ರೀಘ್ರದಲ್ಲೇ ಬಿಜೆಪಿಗೆ ಬರುತ್ತಾರೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಮೂಲತಃ ಬಿಜೆಪಿ ಹಿನ್ನೆಲೆಯುಳ್ಳವರು. ಅವರಿಗೆ ಕಾಂಗ್ರೆಸ್ ಸಂಸ್ಕೃತಿ ಇಷ್ಟವಾಗುವುದಿಲ್ಲ. ಶೀಘ್ರದಲ್ಲಿ ಅವರು ಬಿಜೆಪಿಗೆ ಬರುತ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ನಾವು ಅವರನ್ನ ಡಿಸಿಎಂ ಮಾಡಿದ್ದೆವು. ಅಲ್ಲಿಗೆ ಕರೆದುಕೊಂಡು ಹೋಗಿ, ಅವರನ್ನು ಪುಕ್ಸಟ್ಟೆ ಕೂರಿಸಿದ್ದಾರೆ. ಅದರಿಂದ ಲಕ್ಷ್ಮಣ ಸವದಿ ಬಹಳಷ್ಟು ದಿನ ಅಲ್ಲಿ ಇರುವುದಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿತರು. ಅವರ ಬಗ್ಗೆ ನನಗೆ ಗೊತ್ತು ಎಂದರು.
ಬಿಜೆಪಿಯ ಹಿರಿಯ ನಾಯಕ ಅಡ್ವಾಣಿಗೆ ಭಾರತ ರತ್ನ ದೊರೆತ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಡ್ವಾಣಿ ಅವರು ಇಡೀ ದೇಶದ ಮೂಲೆ ಮೂಲೆಗಳಲ್ಲಿ ರಥಯಾತ್ರೆ ಮೂಲಕ ದೇಶವನ್ನು ಜೋಡಿಸಿದ್ದರು. ದೇಶದಲ್ಲಿ ಸಾಂಸ್ಕೃತಿಕ ಸಂಚಲನವನ್ನು ನಿರ್ಮಾಣ ಮಾಡಿದಂತಹ ಅಡ್ವಾಣಿ ಅವರಿಗೆ ಭಾರತದ ಸರ್ಕಾರ ಭಾರತ ರತ್ನ ನೀಡಿ ಪುರಸ್ಕರಿಸಿದೆ. ಅಡ್ವಾಣಿಯವರಿಗೆ ನೀಡಿರುವುದರಿಂದ ಭಾರತ ರತ್ನಕ್ಕೆ ಈಗ ಮೆರಗು ಬಂದಿದೆ. ಅಡ್ವಾಣಿಯವರಿಗೆ ಇನ್ನಷ್ಟು ಆರೋಗ್ಯ ನೀಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವುದು ಸಂತೋಷದ ವಿಚಾರ. ಈ ಮೊದಲೇ ಅವರಿಗೆ ಭಾರತ ರತ್ನ ನೀಡಬೇಕಾಗಿತ್ತು ಎಂದು ಆರಗ ಜ್ಞಾನೇಂದ್ರ ಹೇಳಿದರು.