ಮಂಗಳೂರು: ಕಳೆದ ವರ್ಷದ ನವೆಂಬರ್ ನಲ್ಲಿ ಮಂಗಳೂರು ಕಂಕನಾಡಿ ಬಳಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್ (ISIS) ಹೊತ್ತುಕೊಂಡಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ತಮಿಳುನಾಡಿನ ಕೊಯಂಬತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟವನ್ನೂ ಐಎಸ್‌ಗೆ ಸೇರಿದ ಉಗ್ರರು ನಡೆಸಿದ್ದರು ಎಂದು ಹೇಳಿಕೊಂಡಿದೆ.
ಇಸ್ಲಾಮಿಕ್ ಸ್ಟೇಟ್ ವಿಲಾಯಾ ಖೋರಾಸಾನ್ ತನ್ನ ವಾಯ್ಸ್ ಆಫ್ ಖೋರಾಸಾನ್ ನಿಯತಕಾಲಿಕೆಯ 23ನೇ ಸಂಚಿಕೆಯಲ್ಲಿ, ಕಳೆದ ವರ್ಷ ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟವನ್ನು ಐಎಸ್ ಅಂಗಸಂಸ್ಥೆ ಉಗ್ರಗಾಮಿಗಳು ನಡೆಸಿದೆ ಎಂದು ಹೇಳಿಕೊಂಡಿದೆ.
ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು ‘ಭಯೋತ್ಪಾದನಾ ಕೃತ್ಯ’ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆ ಸಮಯದಲ್ಲೇ ಸ್ಪಷ್ಟಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದೂ ಪ್ರವೀಣ್ ಸೂದ್ ಮಾಹಿತಿ ನೀಡಿದ್ದರು.
ಆದರೆ ಆ ಬಳಿಕ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ತನ್ನದೇ ಕೃತ್ಯ ಎಂದು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿತ್ತು. ಕದ್ರಿ ದೇವಸ್ಥಾನ ತನ್ನ ಟಾರ್ಗೆಟ್ ಆಗಿತ್ತು ಎಂದು ಅದು ಹೇಳಿಕೊಂಡಿದೆ. ಜತೆಗೆ ‘ನಿಮ್ಮ ಸಂಭ್ರಮ ಕ್ಷಣಿಕವಷ್ಟೇ, ಸದ್ಯದಲ್ಲಿಯೇ ತಕ್ಕ ಪರಿಣಾಮ ಎದುರಿಸುತ್ತೀರಿ’ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಐಸಿಸ್ ಈ ರೀತಿ ಹೇಳಿಕೊಂಡಿದೆ.