Breaking
Tue. Oct 8th, 2024

ಶಿವಮೊಗ್ಗ: ಬೀಡಿಗಾಗಿ ಖೈದಿಗಳಿಂದ ಕಲ್ಲು ತೂರಾಟ, ಸಿಬ್ಬಂದಿಗೆ ಜೀವ ಬೆದರಿಕೆ

By Mooka Nayaka News Sep 17, 2024
Spread the love

ಶಿವಮೊಗ್ಗ: ಬೀಡಿ, ಸಿಗರೇಟು ನೀಡುವಂತೆ ಆಗ್ರಹಿಸಿ ಖೈದಿಗಳು ಕಲ್ಲು ತೂರಾಟ ನಡೆಸಿ ಕಾರಾಗೃಹ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ನಾಲ್ಕು ದಿನದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾಥಿತ್ಯ ಪ್ರಕರಣದ ಬೆನ್ನಲೇ ಶಿವಮೊಗ್ಗ ಜೈಲಿನಲ್ಲಿ ಬಿಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಬೀಡಿ, ಸಿಗರೇಟು ನೀಡುವಂತೆ ಒತ್ತಾಯಿಸಿ ಸಿಟ್ಟಿಗೆದ್ದು ಕಲ್ಲು ತೂರಾಟ ನಡೆಸಿ ಬಂಧಿಖಾನೆ ಸಿಬ್ಬಂದಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ.

ಪರಿ‍ಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆ ಬಂಧಿಖಾನೆಗೆ ಡಿಐಜಿ ದಿವ್ಯಶ್ರೀ ಭೇಟಿ ನೀಡಿದ್ದು ಎರಡು ದಿನದಿಂದ ಜೈಲಿನಲ್ಲೇ ಮೊಕ್ಕಾಂ ಹೂಡಿದ್ದಾರೆ.

ಪ್ರಕರಣದ ಬೆನ್ನಲ್ಲೇ ಕಾರಾಗೃಹದ ಅಧೀಕ್ಷಕರ ಬದಲಾವಣೆ ಮಾಡಲಾಗಿದೆ.

ಜೈಲಿನೊಳಗೆ ಬೀಡಿ, ಸಿಗರೇಟು ಸರಬರಾಜು ಸಂಪೂರ್ಣ ನಿಷೇಧ ಮಾಡಲಾಗಿದ್ದು ಇದ್ರಿಂದ ಕೆರಳಿದ ಕೈದಿಗಳು ಬೀಡಿ, ಸಿಗರೇಟಿಗಾಗಿ ಆಗ್ರಹಿಸಿ ಧರಣಿ ನಡೆಸಿದ್ರು ಅಲ್ಲದೆ ಸೆ.12ರಂದು ಜೈಲಿನ ಕೆಲವು ಕೈದಿಗಳು ಬಂಧಿಖಾನೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಸಿಬ್ಬಂದಿಗಳ ಲಾಠಿಗಳನ್ನು ಕಸಿದುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಜೈಲು ಅಧೀಕ್ಷಕಿ ಡಾ. ಆರ್.ಅನಿತಾ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಕಲ್ಲು ತೂರಾಟ, ಸಿಬ್ಬಂದಿಗೆ ಬೆದರಿಕೆ ಸಂಬಂಧ ರಾಜಶೇಖರ ರೆಡ್ಡಿ, ನೂರುಲ್ಲಾ, ಟಿಪ್ಪು, ಅಭಿಷೇಕ್‌ ಪಾಲನ್‌, ಟ್ವಿಸ್ಟ್‌ ಇಮ್ರಾನ್‌, ರಿಯಾಜ್‌ ಸೇರಿ ಒಟ್ಟು 21 ಕೈದಿಗಳ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Post