ಶಿವಮೊಗ್ಗ: ‘ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರನನ್ನು ನಾನು ಒಪ್ಪುವುದಿಲ್ಲ’ ಎಂದು ತಮ್ಮದೇ ಪಕ್ಷದ ನಾಯಕನ ವಿರುದ್ಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದು ಅಸಮಾಧಾನ ಹೊರಹಾಕಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಯಾರು ಏನೇ ಹೇಳಿದರೂ ಕಾರ್ಯಕರ್ತರು ನನ್ನನ್ನು ಒಪ್ಪಿದ್ದಾರೆ. ನಾನು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಯಾರು ಏನೇ ಮಾತನಾಡಿದರೂ ವಿಜಯೇಂದ್ರನಾದ ನಾನೇ ರಾಜ್ಯಾಧ್ಯಕ್ಷ ಎಂಬುದಂತೂ ಸತ್ಯ. ನನ್ನ ರಾಜ್ಯಾಧ್ಯಕ್ಷನಾಗಿ ಘೋಷಿಸಿದ್ದು ಪಕ್ಷದ ಹೈಕಮಾಂಡ್. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಎಂದು ಘೋಷಿಸಿದವರು ಎಂದು ಬಿ.ವೈ ವಿಜಯೇಂದ್ರ ಶಿವಮೊಗ್ಗದಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.