Breaking
Tue. Oct 8th, 2024

ಯೂಟ್ಯೂಬ್‌ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ

By Mooka Nayaka News Sep 8, 2024
Spread the love

ಪಾಟ್ನಾ: ನಕಲಿ ವೈದ್ಯನೊಬ್ಬ  ಯೂಟ್ಯೂಬ್‌ ನೋಡಿ ಶಸ್ತ್ರ ಚಿಕಿತ್ಸೆ ಮಾಡಿದ ಪರಿಣಾಮ 15 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.

15 ವರ್ಷದ ಬಾಲಕನಿಗೆ ತೀವ್ರ ಹೊಟ್ಟೆ ನೋವು ಹಾಗೂ ವಾಂತಿ ಆಗುತ್ತಿದ್ದ ಪರಿಣಾಮ ಆತನ ಮನೆಯವರು ಮಧುರಾದಲ್ಲಿರುವ ಅಜಿತ್ ಕುಮಾರ್ ಪುರಿ ಎಂಬಾತ ನಡೆಸುತ್ತಿದ್ದ ಕ್ಲಿನಿಕ್‌ಗೆ‌ ಕರೆದುಕೊಂಡು ಹೋಗಿದ್ದಾರೆ.

ಬಾಲಕನ ಪಿತ್ತಕೋಶದಲ್ಲಿ ಕಲ್ಲು ಕಾಣಿಸಿಕೊಂಡಿದ್ದು ಅದನ್ನು ತೆಗೆಯಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅಜಿತ್ ಕುಮಾರ್ ಆಪರೇಷನ್‌ ಮಾಡಲು ಮುಂದಾಗಿದ್ದಾರೆ.

ಅಜಿತ್‌ ಕುಮಾರ್‌ ತಮ್ಮ ಒಪ್ಪಿಗೆಯನ್ನು ಪಡೆಯದೆ ಶಸ್ತ್ರಚಿಕಿತ್ಸೆ ಮಾಡಲು ಪ್ರಾರಂಭಿಸಿದರು. ತಮ್ಮ ಮೊಬೈಲ್ ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಅದರಲ್ಲಿನ ಸಲಹೆಯಂತೆ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಬಾಲಕನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಇದನ್ನು ಪ್ರಶ್ನಿಸಿದಾಗ ಕುಟುಂಬದವರ ಮೇಲೆಯೇ ಪುರಿ “ನಾನು ಇಲ್ಲಿ ವೈದ್ಯನೇ ಅಥವಾ ನೀವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವೈದ್ಯ ಬಾಲಕನನ್ನು ಪಾಟ್ನಾ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ ಆದರೆ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ.

ವೈದ್ಯ ಪುರಿ ನಿರ್ಲಕ್ಷ್ಯ ಮತ್ತು ದುಷ್ಕೃತ್ಯದ ಆರೋಪದ ಮೇಲೆ ಬಾಲಕನ ಕುಟುಂಬ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನಕಲಿ ವೈದ್ಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ನಕಲಿ ವೈದ್ಯ ಪುರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಮತ್ತು ಕ್ಲಿನಿಕ್‌ನ ನೌಕರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Related Post