ಬೆಂಗಳೂರು: ಪತಿಯ ಅನೈತಿಕ ಸಂಬಂಧ, ನಿರಂತರ ಕಿರುಕುಳ ತಾಳಲಾರದೆ ಹುಳಿಮಾವು ಸಮೀಪದ ಅಕ್ಷಯನಗರದಲ್ಲಿ ಮಹಿಳೆಯೊಬ್ಬರು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅನುಷಾ ಮೃತ ದುರ್ದೈವಿ. ಎರಡು ದಿನದ ಹಿಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅನುಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾಗಿದ್ದ ಅನುಷಾ ಸಾವು-ಬದುಕಿನ ಮಧ್ಯೆ ಹೋರಾಡಿ ಇಂದು ಮೃತಪಟ್ಟಿದ್ದಾರೆ.
ಆಗಿದ್ದೇನು?: ಅನುಷಾ ಐದು ವರ್ಷಗಳ ಹಿಂದೆ ಶ್ರೀಹರಿ ಎಂಬಾತನ ಜತೆಗೆ ವಿವಾಹವಾಗಿದ್ದಳು. ದಂಪತಿಗೆ ಎರಡು ವರ್ಷದ ಮಗು ಇದೆ. ಇತ್ತೀಚೆಗೆ ಪತಿ ಶ್ರೀಹರಿಗೆ ಮತ್ತೊಬ್ಬಳ ಜತೆಗೆ ಅನೈತಿಕ ಸಂಬಂಧ ಇದೆ ಎಂಬುದು ಅನುಷಾಳಿಗೆ ಗೊತ್ತಾಯಿತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೊನ್ನೆಯೂ ಇದೇ ವಿಚಾರಕ್ಕೆ ಗಲಾಟೆ ಆಗಿ ತೀವ್ರ ಮನನೊಂದ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಆಕೆಯ ಕಿರುಚಾಟ ಕೇಳಿ ಕುಟುಂಬಸ್ಥರು ಕೂಡಲೇ ಬಾಗಿಲು ಮುರಿದು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅನುಷಾ ಇಂದು ಮೃತಪಟ್ಟಿದ್ದಾಳೆ.
ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದರ್ಶನ್ ಎರಡನೇ ಮದುವೆ ಆಗಿಲ್ವಾ ಎಂದ ಗಂಡ: ಈ ಬಗ್ಗೆ ಅನುಷ ತಂದೆ ಹೇಮಂತ್ ಪ್ರತಿಕ್ರಿಯಿಸಿದ್ದು, ಕಳೆದ ಮೂರು ತಿಂಗಳಿನಿಂದ ಮಗಳು ಮತ್ತು ಅಳಿಯ ಮಧ್ಯೆ ಜಗಳ ಹೆಚ್ಚಾಗಿತ್ತು. ನನ್ನ ಮಗಳಿಗೆ ಮಹಿಳೆ ಠಾಣೆಗೆ ದೂರು ಕೊಡೋಣಾ ಅಂದಿದ್ದೆ. ಇಲ್ಲ ಬೇಡ ನನ್ನ ಸಂಸಾರನ ಸರಿ ಮಾಡಿಕೊಳ್ಳುತ್ತೀನಿ ಅಂತಿದ್ದಳು. ಮಗಳು ಬೆಂಕಿ ಹಚ್ಚಿಕೊಳ್ಳುವಾಗ ಅವನು ಮನೆಲೇ ಇದ್ದಾನೆ, ಆದರೂ ಕಾಪಾಡಿಲ್ಲ.
ರೂಮ್‌ನ ವಾಶ್ ರೂಂನಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮಾಡಿಕೊಂಡೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಮೊದಲೇ ಪೆಟ್ರೋಲ್ ತೆಗೆದುಕೊಂಡು ಬಂದು ಮನೆಯಲಿ ಇಟ್ಟಿದ್ದಾಳೆ. ವೀಡಿಯೊ ಕಾಲ್ ರಿಸೀವ್ ಮಾಡಿ ಸುಮ್ಮನೆ ಇದ್ದಾನೆ. ಈ ಬಗ್ಗೆ ಕೇಳಿದ್ದರೆ, ನಟ ದರ್ಶನ್ ಎರಡನೆ ಮದುವೆ ಆಗಿದ್ದಾನೆ ಆತ ಸಂತೋಷವಾಗಿಲ್ವಾ? ನಾನು ಎರಡನೇ ಮದುವೆ ಆದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದನಂತೆ ಎಂದರು.
ಪತಿಗೆ ವಿಡಿಯೊ ಕಾಲ್ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದ ಅನುಷಾ: ಅನುಷಾ ಗಂಡನಿಗೆ ವಾಟ್ಸಪ್ ಕಾಲ್ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಆದರೂ ಶ್ರೀಹರಿ ಸುಮ್ಮನಾಗಿದ್ದ. ನನಗೆ ಬೇರೆ ಸಂಬಂಧ ಇದೆ ನನ್ನ ಬಿಟ್ಟು ಬಿಡು ಅಂತಿದ್ದ. ಆಕೆ ಬೆಂಕಿ ಹಚ್ಚಿಕೊಂಡಾಗ ಕಾಪಾಡಬಹುದಿತ್ತು, ಆದರೆ ಸಾಯಲಿ ಅಂತಾನೇ ಸುಮ್ಮನೆ ಇದ್ದ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ಮೃತಳ ಅಕ್ಕ ಉಷಾ ಆಕ್ರೋಶ ಹೊರಹಾಕಿದ್ದಾರೆ.