ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪ ಗಣಪತಿ ವಿಗ್ರಹ ತರಲೆಂದು ಗೂಡ್ಸ್ ಆಟೋದಲ್ಲಿ ಯುವಕರ ಗುಂಪು ಪ್ರಯಾಣಿಸುತ್ತಿದ್ದಾಗ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದರು.
ಅಪಘಾತದಲ್ಲಿ ಲಿಂಗದಹಳ್ಳಿ ಗ್ರಾಮದ ಶ್ರೀಧರ ಮತ್ತು ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇತರ ಮೂವರು ಗಂಭೀರ ಗಾಯಗೊಂಡಿದ್ದರು. ಮೃತ ಯುವಕರ ಪೋಷಕರು ತಮ್ಮ ಮಕ್ಕಳ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದು, ತರೀಕೆರೆ ಆಸ್ಪತ್ರೆಯ ವೈದ್ಯರ ನೆರವಿನಿಂದ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರ ಸಲಹೆ ಮೇರೆಗೆ ಯುವಕರ ಪೋಷಕರಾದ ಕುಬೇಂದ್ರ-ಪದ್ಮಾ ಮತ್ತು ರಮೇಶ್-ಶೋಭಾ ಅವರು ತಮ್ಮ ಮಕ್ಕಳ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ನಾಲ್ವರು ಅಂಧರಿಗೆ ದೃಷ್ಟಿ ದೊರಕಿದಂತಾಗುತ್ತದೆ ಎಂದು ತರೀಕೆರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದೇವರಾಜು ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಲಿಂಗದಹಳ್ಳಿಯಿಂದ ತರೀಕೆರೆಗೆ ಗೂಡ್ಸ್ ವಾಹನದಲ್ಲಿ ಗಣಪತಿ ತರಲೆಂದು ಸಂಭ್ರಮದಿಂದ ಹೊರಟಿದ್ದ ಯುವಕರ ಗುಂಪು ಅಪಘಾತದಲ್ಲಿ ಸಾವನ್ನಪ್ಪಿ ಕುಟುಂಬದವರು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತ್ತು. ಮೂವರು ಯುವಕರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.