Trending

ಮಾಜಿ ಪತಿಯಿಂದಲೇ ಮಹಿಳೆಯ ಬರ್ಬರ ಹತ್ಯೆ : ದುರ್ವಾಸನೆಯಿಂದ ಘಟನೆ ಬೆಳಕಿಗೆ

Spread the love

ಬೆಳಗಾವಿ: ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಮಹಿಳೆಯೊಬ್ಬರನ್ನು ಅವರ ಮಾಜಿ ಪತಿಯೇ ಕೊಲೆ ಮಾಡಿರುವ ಘಟನೆ ಅ.13ರಂದು ಸವದತ್ತಿಯ ರಾಮಾಪೂರ ಸೈಟ್ ಬಡಾವಣೆಯಲ್ಲಿ ನಡೆದಿದೆ. ಮೃತ ದೇಹದ ದುರ್ವಾಸನೆಯಿಂದ ಈ ಘಟನೆ ನಿನ್ನೆ ಶುಕ್ರವಾರ ಬೆಳಕಿಗೆ ಬಂದಿದೆ.

ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದ ಕಾಶವ್ವ ಕರಿಕಟ್ಟಿ (34) ಕೊಲೆಯಾದ ದುರ್ದೈವಿ ಮಹಿಳೆ. ನಿಪ್ಪಾಣಿ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​ ಸಂತೋಷ ಕಾಂಬಳೆ (35) ಕೊಲೆಗೈದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ ಏನು..?: ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶವ್ವ ಹಾಗೂ ನಿಪ್ಪಾಣಿಯ ಕಾನ್ಸ್​ಟೇಬಲ್​ ​ ಸಂತೋಷ ಕಾಂಬಳೆ ಇಬ್ಬರು ಪರಸ್ಪರ ಪ್ರೀತಿಸಿ 2013ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 11 ವರ್ಷದ ಪುತ್ರನಿದ್ದಾನೆ. ನಿಪ್ಪಾಣಿಯಲ್ಲಿಯೇ ಪತಿ, ಪತ್ನಿಯರ ಮಧ್ಯೆ ಕಲಹ ಶುರುವಾಗಿತ್ತು. ಇದರಿಂದ ಬೇಸತ್ತ ಪತ್ನಿ ಕಾಶವ್ವ ಸವದತ್ತಿ ಡಿಪೋಗೆ ವರ್ಗ ಮಾಡಿಸಿಕೊಂಡಿದ್ದರು. ಅದಾದ ಬಳಿಕವೂ ಸವದತ್ತಿಗೆ ಬಂದು ಸಂತೋಷ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಸಂತೋಷನನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಅಷ್ಟೇ ಅಲ್ಲದೇ ಪತ್ನಿ ಕಾಶವ್ವ ಇತ್ತೀಚೆಗೆ ಪತಿ ಸಂತೋಷನಿಂದ ವಿವಾಹ ವಿಚ್ಛೇದನ ಪಡೆದಿದ್ದರು. ಆದಾದ ನಂತರವೂ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಅ.13 ರಂದು ಪತ್ನಿ ಮನೆಗೆ ಬಂದು ಜಗಳವಾಡಿದ್ದ ಸಂತೋಷ ಮಾರಕಾಸ್ತ್ರದಿಂದ ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ ಮಾಡಿ, ಈ ವಿಷಯ ಯಾರಿಗೂ‌ ಗೊತ್ತಾಗಬಾರದು ಅಂತಾ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದ.

ಇತ್ತ ಕರ್ತವ್ಯಕ್ಕೆ ಹಾಜರಾಗದ ಕಾಶವ್ವ ಅವರನ್ನು ನೋಡಲು ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ಗುರುವಾರ ರಾತ್ರಿ ಅವರ ಮನೆಗೆ ಬಂದು ನೋಡಿದಾಗ ದುರ್ವಾಸನೆ ಬಂದಿತ್ತು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಕೊಲೆ ಆಗಿರುವುದು ಬೆಳಕಿಗೆ ಬಂದಿತ್ತು. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

[pj-news-ticker]