ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ದಾಟುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹುಲಿಯೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುಮಾರು ಒಂದೂವರೆ ವರ್ಷದ ಗಂಡು ಹುಲಿ ಸಾವನ್ನಪ್ಪಿದ್ದು, ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ಮು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಮೈಸೂರಿನಿಂದ ನಂಜನಗೂಡು ಕಡೆಗೆ ಸಂಚರಿಸುವ ವೇಳೆ ಒಂದು ಬದಿಯಿಂದ ಮತ್ತೊಂದು ಬದಿಗೆ ಹುಲಿ ರಸ್ತೆ ದಾಟುವಾಗ ಢಿಕ್ಕಿ ಹೊಡೆದಿದೆ.ಮೈಸೂರಿನ ಹೊರವಲಯದಲ್ಲಿ ಆಗಾಗ ಕಾಣಸಿಗುತ್ತಿದ್ದ ನಾಲ್ಕು ಹುಲಿ ಮರಿಗಳಲ್ಲಿ ಈ ಕೂಡ ಒಂದಾಗಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಇದೀಗ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಅರಣ್ಯಾಧಿಕಾರಿಗಳು, ತನಿಖೆ ಕೈಗೊಂಡಿದ್ದಾರೆ.