ಕೊಪ್ಪಳ : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ನಾನು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಸನ್ನಿವೇಶ ಬಂದರೆ ಬಂಧನ ಮಾಡುತ್ತೇವೆ, ಅದರಲ್ಲಿ ಯಾವುದೇ ಮುಲಾಜಿಲ್ಲ. ಕುಮಾರಸ್ವಾಮಿ ಈಗ ಭಯಪಟ್ಟಿದ್ದಾರೆ. ನಿಯಮ ಉಲ್ಲಂಘಿಸಿ ಗಣಿ ಗುತ್ತಿಗೆ ಮಂಜೂರು ಮಾಡಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗೆ ರಾಜ್ಯಪಾಲರು ಅನುಮತಿ ಕೊಡುತ್ತಾರೆ ಎನ್ನುವ ಭಯ ಇದೆ. ರಾಜ್ಯಪಾಲರ ಅನುಮತಿ ನಾವು ಕೇಳಿಲ್ಲ, ಯಾರೂ ಖಾಸಗಿಯವರೂ ಕೇಳಿಲ್ಲ. ಅನುಮತಿ ಕೇಳಿದ್ದು ಲೋಕಾಯುಕ್ತ’ ಎಂದರು.
‘ಲೋಕಾಯುಕ್ತ ತನಿಖೆ ಮಾಡಿ ದಾಖಲೆ ಸಂಗ್ರಹ ಮಾಡಿ ಆ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿಗೆ ಕೇಳಿದ್ದಾರೆ. ಅಂದರೆ ಕುಮಾರಸ್ವಾಮಿ ಅವರ ಮೇಲೆ ದಾಖಲೆ ಇವೆ ಎಂದರ್ಥ. ತನಿಖೆ ಮಾಡಿ ದಾಖಲೆ ಇದ್ದರೂ ಸುಮ್ನೆ ಬಿಟ್ಟು ಬಿಡಲಾಗುತ್ತದೆಯೇ?’ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರ ಬಳಿ ಹಿಂದೆಯೇ ಅನುಮತಿ ಕೇಳಿತ್ತು. ಈಗ ಮತ್ತೆ ಎರಡನೇ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರು ತಾರತಮ್ಯ ಮಾಡುತ್ತಿದ್ದಾರೆ.ಟಿ.ಜೆ. ಅಬ್ರಹಾಂ ಕೊಟ್ಟ ದೂರಿನ ಮೇಲೆ ಒಂದೇ ದಿನದಲ್ಲಿ ನನಗೆ ನೋಟಿಸ್ ಕೊಟ್ಟರು. ಕುಮಾರಸ್ವಾಮಿ ಅವರ ಕೇಸ್ ನಲ್ಲಿ ಯಾಕೆ ಅನುಮತಿ ಕೊಟ್ಟಿಲ್ಲ. ನನ್ನ ಕೇಸ್ ನಲ್ಲಿ ಪೊಲೀಸ್ ಅಧಿಕಾರಿ, ಲೋಕಾಯುಕ್ತ ಅಧಿಕಾರಿ ಅನುಮತಿ ಕೇಳಿಲ್ಲ. ನನ್ನ ಮೇಲೆ ಯಾವುದೇ ತನಿಖೆಯೂ ಆಗಿಲ್ಲ. ಆದರೂ ರಾಜ್ಯಪಾಲರು ನನ್ನ ಮೇಲೆ ತನಿಖೆಗೆ ಅನುಮತಿ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಅವರ ಮೇಲೆ ಲೋಕಾಯುಕ್ತರು ತನಿಖೆ ಮಾಡಿ, ಅನುಮತಿ ಕೊಡಿ ಎಂದು ಕೇಳಿದರೂ ಕೊಟ್ಟಿಲ್ಲ. ಇದು ರಾಜ್ಯಪಾಲರು ಮಾಡುತ್ತಿರುವ ತಾರತಮ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.