ಮೈಸೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ 82 ವಯಸ್ಸಿನಲ್ಲಿ ಪೋಕ್ಸೋ ಕೇಸ್‌ನಲ್ಲಿ ಸಿಕ್ಕಾಕೊಂಡಿದ್ದಾರೆ. ಆದರೆ, ಕೋರ್ಟ್ ದಯೆಯಿಂದ ಜೈಲಿಗೆ ಹೋಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ಪೋಕ್ಸೋ ಕೇಸ್‌ನಲ್ಲಿ ಸಿಕ್ಕಾಕೊಂಡಿರುವ ಯಡಿಯೂರಪ್ಪನವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕು ಏನಿದೆ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಕೋರ್ಟ್ ದಯೆಯಿಂದ ಜೈಲಿಗೆ ಹೋಗಿಲ್ಲ. ಪೋಕ್ಸೋ ಪ್ರಕರಣದಲ್ಲಿ ಯಾರೀಗೂ ಜಾಮೀನು ಸಿಗಲ್ಲ. ಸದ್ಯ ಅವರ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿದೆ. ಹೀಗಿರುವಾಗ ಯಡಿಯೂರಪ್ಪನವರಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ಕೂಡಲೇ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗಬೇಕು. ಅವರು ಮೊದಲು ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಆಗಲಿ ಮತ್ತೆ ನನ್ನ ರಾಜೀನಾಮೆಯನ್ನು ಕೇಳಲಿ ಎಂದು ಸವಾಲು ಹಾಕಿದರು.
ಸುಳ್ಳು ಹೇಳಿಕೊಂಡು ಹೋದರೆ ಯಶಸ್ವಿ ಸಿಗುತ್ತಾ? ಸತ್ಯಕ್ಕೆ ಯಾವತ್ತೂ ಜಯ ಸಿಗಲಿದೆ. ಯಡಿಯೂರಪ್ಪ ಚೆಕ್ ಮೂಲಕ ದುಡ್ಡು ತೆಗೆದುಕೊಂಡಿದ್ದರು, ಅವರು ಡಿನೋಟಿಫೈ ಮಾಡಿದ್ದರು. ನಾನೇನಾದರೂ ಪತ್ರ ಕೊಟ್ಟಿದ್ದೇನಾ? ನನ್ನ ಸಹಿ ಇದ್ಯಾ? ನಾನು ಸಿಎಂ ಇದ್ದಾಗ ಹೆಂಡ್ತಿ ಬದಲಿ ಸೈಟ್‌ಗೆ ಅರ್ಜಿ ಕೊಟ್ಟಾಗಲೂ ನನ್ನ ಗಮನಕ್ಕೆ ಬಂದಾಗ ನಾನು ಸಿಎಂ ಆದ ಹಿನ್ನೆಲೆಯಲ್ಲಿ ಅದನ್ನು ಕೊಡಲು ಬಿಟ್ಟಿಲ್ಲ.
2021 ರಲ್ಲಿ ಮತ್ತೆ ಅರ್ಜಿ ಕೊಟ್ಟಾಗ ಅವಾಗ ಬಿಜೆಪಿ ಸರ್ಕಾರ ಇತ್ತು, ನಾನು ಹೇಗೆ ಪ್ರಭಾವ ಬೀರಲು ಸಾಧ್ಯ? ಕಾನೂನು ಪ್ರಕಾರ ಇರುವುದರಿಂದ ಕೊಟ್ಟಿದ್ದಾರೆ. ಕಾನೂನಾತ್ನಕವಾಗಿ ಇರುವಾಗ ರಾಜ್ಯಪಾಲರು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದೆ. ಅದನ್ನು ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪೂರ್ತಿಯಾಗಿ ಬಿಚ್ಚಿಡುತ್ತೇನೆ. ಈಗಾಗಲೇ ಕೆಲವು ಪ್ರಕರಣಗಳ ತನಿಖೆಯೂ ನಡೆಯುತ್ತಿವೆ. ಬಿಜೆಪಿ ಸುಳ್ಳು ಹೇಳಿಕೊಂಡು ನಡೆಯುತ್ತಿದ್ದಾರೆ. ಆದರೆ ಸತ್ಯಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.