ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇಮಕ ಮಾಡಿದ್ದಾರೆ. ಅಂತಹ ನಾಯಕರ ತೀರ್ಮಾನವನ್ನ ಪ್ರಶ್ನಿಸಲು ಆಗುತ್ತಾ ಎಂದರು.
ಎಲ್ಲ ಪಕ್ಷಗಳಂತೆ ಬಿಜೆಪಿಯಲ್ಲೂ ಸಣ್ಣ ಪುಟ್ಟ ಸಮಸ್ಯೆ ಇವೆ. ಅವುಗಳನ್ನೆಲ್ಲವನ್ನೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ, ಬಗೆಹರಿಸಲಾಗುವುದು. ಪಕ್ಷದ ಎಲ್ಲ ಹಿರಿಯರು ಎಲ್ಲವನ್ನೂ ಬಗೆಹರಿಸುವರು. ಬಿಜೆಪಿ ಹಿಂದಿನಿಂದ ಮಾತ್ರವಲ್ಲ ಈ ಕ್ಷಣಕ್ಕೂ ಶಿಸ್ತಿನ ಪಕ್ಷ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಜಯೇಂದ್ರ ಅವರು ಗೆದ್ದಿರುವುದು ಕಾಂಗ್ರೆಸ್‌ನ ಭಿಕ್ಷೆ ಯಿಂದ ಎಂಬ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಅವರಿಗೆ ಯಾವುದೇ ಭಿಕ್ಷೆ ಬೇಕಾಗಿಯೇ ಇಲ್ಲ. ಅವರ ತಂದೆ ಯಡಿ ಯೂರಪ್ಪ ಅವರು ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ, ಪುರಸಭೆ ಸದಸ್ಯರು, ಅಧ್ಯಕ್ಷರು, ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿದವರು. ಅದನ್ನು ನೋಡಿಯೇ ಶಿಕಾರಿಪುರದ ಜನರು ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡಲೇ ತಮ್ಮ ಹೇಳಿಕೆಯನ್ನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾ ಯಿಸಿದರು.