ಬೆಂಗಳೂರು: ಕೋಲ್ಕತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ(IMA ) ಸದಸ್ಯ ವೈದ್ಯರು ಶನಿವಾರ(ಆ 17) ಮುಷ್ಕರ ನಡೆಸುತ್ತಿದ್ದಾರೆ. ಯಾವುದೇ ರೋಗಿಗಳಿಗಳಿಗೆ ತೊದರೆಯಾಗದಂತೆ ಕ್ರಮವಹಿಸಿರುವ ರಾಜ್ಯ ಸರಕಾರ ಶುಕ್ರವಾರ ಸರಕಾರಿ ಆಸ್ಪತ್ರೆಗಳ ವೈದ್ಯಕೀಯ ಅಧಿಕಾರಿಗಳು ಮತ್ತು ಶಸ್ತ್ರಚಿಕಿತ್ಸಕರ ರಜೆಗಳನ್ನು ರದ್ದು ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, ‘ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಎಲ್ಲಾ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ತುರ್ತು ಸೇವೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಲಾಗಿದೆ.
IMA ಕರ್ನಾಟಕ ಘಟಕದ ಅಧ್ಯಕ್ಷ ಶ್ರೀನಿವಾಸ ಎಸ್ ಅವರು ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದು’ ಕರ್ನಾಟಕದಾದ್ಯಂತ IMA ಶಾಖೆಗಳು ಮುಚ್ಚಲ್ಪಡುತ್ತವೆ ಮತ್ತು ಎಲ್ಲಿಯೂ ಒಪಿಡಿ ಸೇವೆಗಳು ಲಭ್ಯ ಇರುವುದಿಲ್ಲ.ಹಲವು ಭಾಗಗಳಲ್ಲಿ ವೈದ್ಯರಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ‘ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ, ಚಾಮರಾಜಪೇಟೆಯ ಐಎಂಎ ಕಚೇರಿಯಲ್ಲಿ ಪ್ರಮುಖ ಖಂಡನಾ ಕಾರ್ಯಕ್ರಮ ನಡೆಯಲಿದ್ದು, 1,000 ವೈದ್ಯರು ಭಾಗವಹಿಸುವ ಸಾಧ್ಯತೆಯಿದೆ ಎಂದು ಶ್ರೀನಿವಾಸ ಹೇಳಿದ್ದಾರೆ.