ದಾವಣಗೆರೆ : ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗಲೇ ವಿದ್ಯುತ್ ತಗುಲಿ ಅಲ್ಲೇ ಕೆಲಸ ಮಾಡುತ್ತಿದ್ದ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯ ಕಾಟೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ದಂಪತಿಗಳನ್ನು ಲತಾ ಹಾಗೂ ನಾಗರಾಜ್ ಎಂದು ತಿಳಿದುಬಂದಿದೆ. ನಾಗರಾಜ್ ಹಾಗೂ ಲತಾ ಇಬ್ಬರೂ ರೈತರಾಗಿದ್ದು, ದಿನನಿತ್ಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಳೆ ಹೆಚ್ಚಾಗಿದ್ದರಿಂದ ಬೆಳೆಯ ಆರೈಕೆ ಮಾಡುತ್ತಿದ್ದರು. ಮಳೆಯಿಂದ ಇಡೀ ಟ್ರಾನ್ಸ್‌ಫಾರ್ಮರ್ ಒದ್ದೆಯಾಗಿದ್ದು, ವಿದ್ಯುತ್ ಗ್ರೌಂಡ್ ಆಗಿದೆ.
ಇದನ್ನು ಗಮನಿಸದ ಇಬ್ಬರೂ ಕೆಲಸ ಮಾಡುತ್ತಾ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.ವಿಷಯ ತಿಳಿದು ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ತಕ್ಷಣ ಗ್ರಾಮಕ್ಕೆ ತೆರಳಿ ಸಂತಾಪ ಸೂಚಿಸಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಘಟನೆ ಸ್ಥಳಕ್ಕೆ ದಾವಣಗೆರೆ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.