ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಅತಿ ದೊಡ್ಡ ರಹಸ್ಯ ರಿವೀಲ್ ಆಗಿದೆ. ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಸಿಕ್ಕಿದ್ದು, ಇದರಿಂದ ಪ್ರಕರಣದಲ್ಲಿ ದರ್ಶನ್‌ಗೆ ಕಂಟಕವಾಗಲಿರುವ ಅತಿ ದೊಡ್ಡ ಸಾಕ್ಷ್ಯ ಪೊಲೀಸರಿಗೆ ಸಿಕ್ಕಂತಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಗೆದಷ್ಟು ಹತ್ತಾರು ಸಾಕ್ಷಿಗಳು ಹೊರಬರುತ್ತಿವೆ. ಆರೋಪಿ ಪವಿತ್ರಾಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿಯ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬಿಯರ್ ಬಾಟಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ ಎನ್ನಲಾಗಿದೆ.
ಪವಿತ್ರಾಗೌಡ ಮನೆಯಲ್ಲಿ ಕೊಲೆ ದಿನ ಆಕೆ ಧರಿಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ಆರೋಪಿಗಳು ಅಲ್ಲೇ ಪಾರ್ಟಿ ಮಾಡಿ ಕುಷ್ಕ ತಿಂದಿದ್ದರು. ಇದರಲ್ಲಿ ಒಂದು ಬಿಯರ್ ಬಾಟಲಿ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಆರೋಪಿಯೊಬ್ಬನ ಫಿಂಗರ್ ಪ್ರಿಂಟ್ ಕೂಡ ಇದ್ದು, ತನಿಖೆ ನಡೆಯುತ್ತಿದೆ. ಸದ್ಯ ಬಿಯರ್ ಬಾಟಲಿಯನ್ನು ಪ್ರಮುಖ ಸಾಕ್ಷಿಯಾಗಿ ಮಾಡಿರುವ ಪೊಲೀಸರು, ಇನ್ನೂ ಹೆಚ್ಚಿನ ಸಾಕ್ಷಿಗಳ ಹುಡುಕಾಟದಲ್ಲಿದ್ದಾರೆ.
ಕೊಲೆ ಪ್ರಕರಣ ಸಂಬಂಧ ದರ್ಶನ್ ಆಪ್ತ ಬಳಗದ ಮತ್ತೊಬ್ಬ ನಟನ ಸಾಕ್ಷಿ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ರಡಿ ಪೊಲೀಸರು ದಾಖಲಿಸಿದ್ದಾರೆ. ಹತ್ಯೆಗೂ ಮುನ್ನ ದರ್ಶನ್ ಜೊತೆ ಭೋಜನ ಕೂಟದಲ್ಲಿದ್ದ ಕಾರಣಕ್ಕೆ ನಟ ಯಶಸ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ.