Trending

ನಟ ದ್ವಾರಕೀಶ್‌ ಸೊಸೆ ವಿರುದ್ಧ ಹಲವರಿಗೆ ವಂಚನೆ : ಹಣ ವಾಪಸ್‌ ಕೇಳಿದ್ದಕ್ಕೆ ಪೊರಕೆಯಿಂದ ಹಲ್ಲೆ

Spread the love

ಬೆಂಗಳೂರು: ಖ್ಯಾತ ನಟ ದ್ವಾರಕೀಶ್ ಅವರ ಸೊಸೆ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ವ್ಯಕ್ತಿಯೊಬ್ಬರು ಹಣ ವಾಪಸ್‌ ಕೇಳಲು ಹೋಗಿದ್ದ ವೇಳೆ ಆತನಿಗೆ ದ್ವಾರಕೀಶ್ ಅವರ ಸೊಸೆ ಪೊರಕೆಯಿಂದ ಹಲ್ಲೆ ನಡೆಸಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ದ್ವಾರಕೀಶ್ ಅವರ ಎರಡನೇ ಪತ್ನಿ ಶೈಲಜಾ ಕುಮಾರಿ ಅವರ ಪುತ್ರ ಸಮರ್ಥ್ ಅವರ ಪತ್ನಿ ವರ್ಷಾ ರೈ  ವಿರುದ್ಧ ಹತ್ತಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವರ್ಷಾ ರೈ ಅವರ ಬಳಿ ಹಣಕಾಸಿನ ವ್ಯವಹಾರ ನಡೆಸಿದ್ದ ರಮಣ ರೆಡ್ಡಿ ಎಂಬುವವರು ತಾವು ನೀಡಿದ್ದ 6 ಲಕ್ಷ ರೂ.ಗಳನ್ನು ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ವರ್ಷಾ ರೈ ಅವರು ರಮಣ ರೆಡ್ಡಿ ಮೇಲೆ ಬೀದಿಯಲ್ಲೇ ಪೊರಕೆಯಿಂದ ಹಲ್ಲೆ ನಡೆಸಿದ್ದಾರೆ. ಗಲಾಟೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವರ್ಷಾ ರೈ ವಿರುದ್ಧದ ಆರೋಪವೇನು?

ವರ್ಷಾ ರೈ ಕಳೆದ ಮೂರು ವರ್ಷಗಳಿಂದ ವಿವಿಧ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಚೀಟಿ ಹಾಕುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ದಿನಸಿ ಅಂಗಡಿಗೆ ಬರುವವರೊಂದಿಗೆ ಆತ್ಮೀಯತೆ ಬೆಳೆಸಿ, ಹಣ ಹೂಡಿಕೆ ಮಾಡುವಂತೆ ಆಸೆ ತೋರಿಸಿ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ.

ಸುಮಾರು 110 ಗ್ರಾಂ ಚಿನ್ನದ ಆಭರಣಗಳನ್ನು ಪಡೆದು ವಾಪಸ್ ನೀಡದೆ ವಂಚಿಸಿರುವ ಆರೋಪವನ್ನೂ ಹೊರಿಸಲಾಗಿದೆ. ಸುಕನ್ಯಾ ಎಂಬುವವರಿಂದ 35 ಸಾವಿರ ರೂಪಾಯಿ ಪಡೆದು ವಂಚಿಸಿರುವುದು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಂದ ದೂರು ದಾಖಲಾಗಿದೆ.

ಇನ್ನು ತಮ್ಮ ಹಣ ವಾಪಸ್ ಕೇಳಲು ಹೋದವರ ಮೇಲೆ ವರ್ಷಾ ರೈ ರೌಡಿಸಂ ಮಾಡುತ್ತಾರೆ ಹಾಗೂ ಪೊಲೀಸರಿಗೆ ಸುಳ್ಳು ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈಗಾಗಲೇ ಆರ್.ಆರ್. ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ವರ್ಷಾ ರೈ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

[pj-news-ticker]