Trending

6 ತಿಂಗಳು 18 ಬಿಜೆಪಿ ಶಾಸಕರಿಗಿಲ್ಲ ವಿಧಾನಸಭೆ ಎಂಟ್ರಿ : ದಿನಭತ್ಯೆಯೂ ಇಲ್ಲ – ಅಮಾನತುಗೊಂಡುವರು ಯಾರ್ಯಾರು?

Spread the love

ಬೆಂಗಳೂರು: ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ ವಿಧೇಯಕಕ್ಕೆ ವಿರೋಧಿಸಿ ವಿಪಕ್ಷ ಬಿಜೆಪಿ ವಿಧಾನಸಭೆ ಕಲಾಪದಲ್ಲಿಂದು ಭಾರಿ ಗದ್ದಲ ಎಬ್ಬಿಸಿದೆ. ಸ್ಪೀಕರ್​ ಯುಟಿ ಖಾದರ್ ಅವರು ಸುಮ್ಮನಿರುವಂತೆ ಎಷ್ಟೇ ಮನವಿ ಮಾಡಿದರೂ ಸಹ ಕೇಳಿಲ್ಲ. ಮತ್ತೊಂದು ಹೆಜ್ಜೆ ಮುಂದೆ ಹೋದ ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದು ಸ್ಪೀಕರ್​ ಮೇಲೆ  ಎಸೆದು ಸಿಟ್ಟು ಹೊರ ಹಾಕಿದರು. ಇದರಿಂದ ಸ್ಪೀಕರ್​ ಯುಟಿ ಖಾದರ್ ಅವರು 18 ಬಿಜೆಪಿ ಶಾಸಕರನ್ನು ಆರು ತಿಂಗಳುಗಳ ಕಾಲ ಅಮಾನತು ಮಾಡಿ ರೂಲಿಂಗ್ ಹೊರಡಿಸಿದ್ದಾರೆ.

ಹೀಗಾಗಿ ಅಮಾನತುಗೊಂಡಿರುವ 18 ಬಿಜೆಪಿ ಶಾಸಕರುಗಳಿಗೆ 6 ತಿಂಗಳು ವಿಧಾನಸಭೆ ಪ್ರವೇಶ ಇರುವುದಿಲ್ಲ.

ಸ್ಪೀಕರ್​ ಪೀಠಕ್ಕೆ ಅಗೌರ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ. ಹನಿಟ್ರ್ಯಾಪ್‌ ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರಿಂದು ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್‌ ಖಾದರ್‌ ಮೇಲೆ ಪೇಪರ್‌ ಎಸೆದು ಸಿಟ್ಟು ಹೊರ ಹಾಕಿದರು. ಇದರಿಂದ ಅಸಮಾಧಾನಗೊಂಡ ಸ್ಪೀಕರ್‌ ಯುಟಿ ಖಾದರ್​ ಕಲಾಪವನ್ನು ಅಲ್ಪ ಸಮಯ ಮುಂದೂಡಿದರು. ಬಳಿಕ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪೀಠಕ್ಕೆ ಅಪಮಾನ ಮಾಡಿದ್ದಾರೆಂದು ಬಿಜೆಪಿ 18 ಶಾಸಕರನ್ನು 6 ತಿಂಗಳ ಕಾಲ ಸಸ್ಪೆಂಡ್‌ ಮಾಡಿ ಸ್ಪೀಕರ್‌ ರೂಲಿಂಗ್‌ ಹೊರಡಿಸಿದರು. ಬಳಿಕ ಮಾರ್ಷಲ್ಸ್​​, ಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಆಚೆ ಹಾಕಿದರು.

ಅಮಾನತುಗೊಂಡುವರು ಯಾರ್ಯಾರು?

  • ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್.
  • ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
  • ಬೆಂಗಳೂರಿನ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್
  • ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ
  • ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್.ಪಾಟೀಲ್
  • ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ
  • ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ
  • ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್
  • ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ
  • ಬೀದರ್ ದಕ್ಷಿಣ ಕ್ಷೇತ್ರದ  ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
  • ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ
  • ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್​ಪಾಲ್ ಸುವರ್ಣ
  • ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರದ  ಶಾಸಕ ಬಿ.ಪಿ.ಹರೀಶ್
  • ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಡಾ.ಭರತ್ ಶೆಟ್ಟಿ
  • ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ
  • ಕಲಬುರಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ
  • ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು
  • ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅಮಾನತು.

ಅಮಾನತುಗೊಂಡ ಶಾಸಕರಿಗೆ ಈ ಷರತ್ತುಗಳು ಅನ್ವಯ

  • ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
  • ಶಾಸಕರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
  •  ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
  • ಅಮಾನತ್ತಿನ ಅವಧಿಯಲ್ಲಿ ಅವರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
  •  ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರು ಮತದಾನ ಮಾಡುವಂತಿಲ್ಲ.
  •  ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.
[pj-news-ticker]