ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರು ಕೀನ್ಯಾ ತಂಡದ ಮುಖ್ಯ ಕೋಚ್ ಆಗಿ ನೇಕಮಗೊಂಡಿದ್ದಾರೆ.
90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್ನಲ್ಲಿ ಕಣಕ್ಕಿಳಿಯಲಿದೆ.
50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 104 ಪಂದ್ಯಗಳಿಂದ 365 ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್ ಕಿತ್ತಿದ್ದಾರೆ. ಲಿಸ್ಟ್ ‘ಎ’ ಕ್ರಿಕೆಟ್ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಸೇರಿ ಒಟ್ಟು 2,548 ರನ್ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.
ಕೀನ್ಯಾ ತಂಡದ ಕೋಚ್ ಆಗಿ ನೇಮಕಗೊಂಡ ವಿಚಾರವನ್ನು ದೊಡ್ಡ ಗಣೇಶ್ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತನ್ನ ಎಲ್ಲ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ತಂಡದ ಏಳಿಗೆಗೆ ಶ್ರಮಿಸಲಿದ್ದೇನೆ” ಎಂದು ಹೇಳಿದ್ದಾರೆ.