ವಾಷಿಂಗ್ಟನ್: ರಸ್ತೆಯಲ್ಲಿ ನಡೆದ ಜಗಳ ತಾರಕಕ್ಕೇರಿ ದುಷ್ಕರ್ಮಿಯೋರ್ವ ಭಾರತ ಮೂಲದ ಅಮೆರಿಕನ್ ಮೇಲೆ ಗುಂಡು ಹಾರಿಸಿ ಕೊಲೆಗೈದಿರುವ ಘಟನೆ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದೆ.
ಎರಡು ವಾರಗಳ ಹಿಂದೆಯಷ್ಟೇ ಮದುವೆಯಾಗಿದ್ದ ಭಾರತೀಯ ಮೂಲದ ಗವಿನ್ ದಸೌರ್ ದುಷ್ಕರ್ಮಿಯ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಜೂ.29ರಂದು ಮೆಕ್ಸಿಕನ್ ಯುವತಿ ವಿವಿಯಾನಾ ಜಾಮೋರಾ ಜೊತೆ ಗವಿನ್ ವಿವಾಹ ನಡೆದಿತ್ತು. ಇವರಿಬ್ಬರು ಮನೆಗೆ ಮರಳುತ್ತಿರುವಾಗ ರಸ್ತೆಯಲ್ಲಿ ಮತ್ತೊಂದು ವಾಹನದ ಚಾಲಕನ ಜೊತೆ ಸಣ್ಣ ಜಗಳ ನಡೆದಿತ್ತು. ಪರಸ್ಪರ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಕೋಪದ ಭರದಲ್ಲಿ ವಾಹನದೊಳಗಿದ್ದ ಆರೋಪಿ ಗವಿನ್ ಮೇಲೆ ಗುಂಡು ಹಾರಿಸುತ್ತಾನೆ. ಗಂಭೀರವಾಗಿ ಗಾಯಗೊಂಡ ಗವನಿ ತಕ್ಷಣ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ದಸೌರ್ ತನ್ನ ಕಾರಿನಿಂದ ಕೆಳಗೆ ಇಳಿದು ಪಿಕಪ್ ಟ್ರಕ್‌ನ ಚಾಲಕನ ಮೇಲೆ ಕಿರುಚಾಡುತ್ತಿರುವುದನ್ನು, ತನ್ನ ಕೈಯಲ್ಲಿದ್ದ ಗನ್‌ನಲ್ಲಿ ವಾಹನಕ್ಕೆ ಪಂಚ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪೊಲೀಸರ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಪೊಲೀಸರು ಹೇಳುವ ಪ್ರಕಾರ ಗವಿನ್ ಕೈಯಲ್ಲೂ ಗನ್ ಇದ್ದ ಕಾರಣ ತನ್ನ ಜೀವ ರಕ್ಷಣೆಗಾಗಿ ಆರೋಪಿ ಗುಂಡು ಹಾರಿಸಿರಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.