ಸಾಗರ: ಬೆಳಗಿನ ಹೊತ್ತು ಮನೆ ಮುಂದೆ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದು ಮಹಿಳೆಯರೋರ್ವರ ಬಂಗಾರದ ತಾಳಿ ಸರವನ್ನು ಕಿತ್ತು ಪರಾರಿಯಾದ ಘಟನೆ ಗುರುವಾರ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗ್ಗೆ ಸುಮಾರು ೧೧ ಗಂಟೆಗೆ ಇಲ್ಲಿನ ಅಗ್ರಹಾರ ಮೊದಲನೇ ತಿರುವಿನಲ್ಲಿರುವ ಗಣೇಶ ವೈದ್ಯರವರ ಹೆಂಡತಿ ಲೀಲಾ ಕಸ ಗುಡಿಸುವಾಗ ಹಿಂಬದಿಯಿಂದ ಬಂದ ಆಗಂತುಕ ಈ ಕೃತ್ಯ ನಡೆಸಿದ್ದಾನೆ. ಅವರ ಕೊರಳಿನಲ್ಲಿದ್ದ ಸುಮಾರು ಎರಡೂವರೆ ಲಕ್ಷ ರೂ. ಮೌಲ್ಯದ ೪೦ ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ಸರವನ್ನು ಕಿತ್ತಿದ್ದಾನೆ. ತಕ್ಷಣ ದೂರದಲ್ಲಿ ಚಾಲು ಇರಿಸಿಯೇ ನಿಲ್ಲಿಸಿದ್ದ ಬೈಕ್ ಏರಿ ಪರಾರಿಯಾಗಿದ್ದಾನೆ.
ಕೂಡಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ಫುಟೇಜ್ ಸಂಗ್ರಹದಿಂದ ಮಾಹಿತಿ ಸಂಗ್ರಹಿಸುತ್ತಿದ್ದು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.