ತೀರ್ಥಹಳ್ಳಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಮುರಾರ್ಜಿ ವಸತಿ ಶಾಲೆಯ ಸಂಗೀತ ಶಿಕ್ಷಕ ಇಮ್ತಿಯಾಜ್ ಎಂಬಾತನನ್ನು ಬಂಧಿಸಲಾಗಿದ್ದು ಆರೋಪಿಯ ವಿರುದ್ದ ಫೋಕ್ಸೋ ಕೇಸ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಬುಧವಾರ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಪ್ರಮುಖರ ಸಮ್ಮುಖದಲ್ಲಿ ಈ ಘಟನೆಯ ಬಗ್ಗೆ ವಿವರಣೆ ನೀಡಿ, ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮೊಂದಿಗೆ ಆರೋಪಿ ಅನುಚಿತವಾಗಿ ವರ್ತಿಸುತ್ತಿರುವುದಾಗಿ ಶಾಲೆಯ ಪ್ರಿನ್ಸಿಪಾಲರಿಗೆ ಲಿಖಿತ ದೂರು ನೀಡಿದ್ದು ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. 12 ವರ್ಷಗಳಿಂದ ಇಲ್ಲಿಯೆ ಕೆಲಸ ನಿರ್ವಹಿಸುತ್ತಿದ್ದ ಆತ ಮಹಿಳಾ ಸಿಬ್ಬಂದಿಗಳ ಜೊತೆಯಲ್ಲೂ ಕೆಟ್ಟದಾಗಿ ವರ್ತಿಸಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ನಮ್ಮ ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲಾ ಎಂದೂ ತಿಳಿಸಿದರು.
ಈ ಘಟನೆ ಮಂಗಳವಾರ ಮಧ್ಯಾಹ್ನದ ವೇಳೆಗಷ್ಟೇ ನಮಗೆ ಮಾಹಿತಿ ದೊರೆತಿದ್ದು ತಲೆ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಆರೋಪಿಯ ಬೆನ್ನು ಹತ್ತಿದ ನಮ್ಮ ಸಿಬ್ಬಂದಿಗಳು ಅದೇ ದಿನ ರಾತ್ರಿ ಸಿನಿಮೀಯ ಘಟನೆಯ ರೀತಿಯಲ್ಲಿ ನೆಲಮಂಗಲದ ಸಮೀಪ ಅಲ್ಲಿನ ಡಿವೈಎಸ್‌ಪಿ ನೆರವಿನಿಂದ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು. ಸಂತ್ರಸ್ಥ ವಿಧ್ಯಾರ್ಥಿನಿಯರಿಗೆ ಸಾಂತ್ವನದ ಮಾತುಗಳನ್ನೂ ಹೇಳಲಾಗಿದೆ ಮತ್ತು ಮಫ್ತಿಯಲ್ಲಿ ಮಹಿಳಾ ಸಿಬ್ಬಂದಿಗಳನ್ನು ಕಾವಲಿಗೆ ನಿಯೋಜಿಸಲಾಗಿದೆ ಎಂದರು.
ಆರೋಪಿಯ ಪತ್ನಿ ಕೊಪ್ಪ ತಾಲೂಕಿನ ಬಾಳೆಹೊನ್ನೂರಿನಲ್ಲಿದ್ದು ಅಲ್ಲಿನ ಮನೆಯಿಂದ ಬಟ್ಟೆಯನ್ನು ಹೊಂದಿಸಿಕೊಂಡು ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ. ಚಿಕ್ಕಮಗಳೂರು ಬಸ್ ನಿಲ್ದಾಣದ ಸಿಸಿ ಟಿವಿಯಲ್ಲಿ ದೊರೆತ ಆತ ತೊಟ್ಟಿದ್ದ ಅಂಗಿಯ ಬಣ್ಣದ ಮಾಹಿತಿ ಪೋಲಿಸರಿಗೆ ಆರೋಪಿಯನ್ನು ಬಂಧಿಸುವಲ್ಲಿ ಸಹಕಾರಿಯಾಗಿದೆ ಎಂದೂ ವಿವರಿಸಿದರು.
ಡಿವೈಎಸ್‌ಪಿ ಗಜಾನನ ಸುತಾರ್ ಹಾಗೂ ಪೋಲಿಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯ ತಂಡದಲ್ಲಿ ಪಿಎಸ್‌ಐ ಶಿವನಗೌಡ, ಎಚ್‌ಸಿ ಲಿಂಗನಗೌಡ ಹಾಗೂ ಕಾನ್ಸ್ಟೇಬಲ್ ವೀರೇಂದ್ರ ಇದ್ದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಈ ಘಟನೆ ತಾಲೂಕಿನ ಘನತೆಗೆ ಮಸಿ ಬಳಿಯುವಂತಿದ್ದು ನಂದಿತಾ ಪ್ರಕರಣದಂತೆ ಉದ್ವಿಗ್ನ ಸ್ಥಿತಿಗೆ ತಲುಪುವ ಮುನ್ನ ಆರೋಪಿಯನ್ನು ಬಂಧಿಸಿರುವುದು ಪ್ರಶಂಸನೀಯವಾಗಿದೆ. ಇಂತಹ ಹೇಯಕೃತ್ಯಕ್ಕೆ ಕಾರಣನಾದ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದೂ ಆಗ್ರಹಿಸಿದರು.
ಡಿವೈಎಸ್‌ಪಿ ಗಜಾನನ ವಾಮನ ಸುತಾರ ಹಾಗೂ ಪೋಲಿಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ, ಬಿಜೆಪಿ ಪ್ರಮುಖರಾದ ಹೆದ್ದೂರು ನವೀನ್, ಮೋಹನಭಟ್, ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.