ಪುಣೆ: ನರೇಂದ್ರ ಮೋದಿ ಅವರ 3.0 ಸರಕಾರದಲ್ಲಿ ನಿರೀಕ್ಷಿತ ಸಂಪುಟ ಸಚಿವ ಸ್ಥಾನ ದೊರೆಯದಿದ್ದಕ್ಕೆ ಶಿವಸೇನೆ (ಶಿಂಧೆ ಬಣ) ಅಸಮಾಧಾನ ಹೊರಹಾಕಿದ್ದು, ಈ ಕುರಿತು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯ ನಾಯಕರು ಮಹಾಯುತಿ ನಾಯಕರಿಗೆ ಲೇವಡಿ ಮಾಡಿದ್ದಾರೆ.
ನಾವು ಸಂಪುಟ ದರ್ಜೆ ಸೇರಿ 3 ಸ್ಥಾನಗಳ ಬಗ್ಗೆ ನಿರೀಕ್ಷೆ ನಿರೀಕ್ಷೆ ಇಟ್ಟಿದ್ದೆವು. ಎನ್‌ಡಿಎನಲ್ಲಿ ಟಿಡಿಪಿ, ಜೆಡಿಯು ಅನಂತರ 7 ಕ್ಷೇತ್ರ ಗೆದ್ದ ಶಿವಸೇನೆ (ಶಿಂಧೆ ಬಣ) 3ನೇ ಸ್ಥಾನದಲ್ಲಿದೆ. ನಮಗಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದ ಚಿರಾಗ್ ಪಾಸ್ವಾನ್, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಜಿತನ್‌ರಾಮ್ ಮಾಂಜಿ ಅವರ ಪಕ್ಷಗಳಿಗೆ ಸಂಪುಟ ಸಚಿವ ಸ್ಥಾನ ದೊರಕಿದೆ. ನಮಗೆ ಮಾತ್ರ ರಾಜ್ಯ ಖಾತೆ ದೊರಕ್ಕಿದ್ದು ಬೇಸರ ತಂದಿದೆ ಎಂದು ಶಿವಸೇನೆ ಸಂಸದ ಶ್ರೀರಂಗ ಬಾರ್ನೆ ಅಸಮಾಧಾನ ಹೊರ ಹಾಕಿದ್ದಾರೆ. ಎನ್‌ಸಿಪಿ (ಅಜಿತ್ ಪವಾರ್) ಬಣಕ್ಕೂ ಇದೇ ರೀತಿ ಆಗಿದೆ.
ಈ ಕುರಿತು ಲೇವಡಿ ಮಾಡಿದ ಮಹಾ ವಿಕಾಸ ಅಘಾಡಿಯ ನಾಯಕರು, ಬಿಜೆಪಿ ಯೂಸ್ ಆ್ಯಂಡ್ ಥ್ರೋ ಪಾಲಿಸಿ ಅನುಸರಿಸುತ್ತದೆ. ಬೇರೆಯವರಿಗೆ ಗುಲಾಮರಾದರೇ ಇದೇ ಗತಿ ಎಂದು ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ ರಾವತ್ ಲೇವಡಿ ಮಾಡಿದ್ದಾರೆ. ಅಜಿತ್ ಪವಾರ್ ಕೂಡ ಈ ಅಂಶವನ್ನು ಅರಿತುಗೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.