ಹೊಸನಗರ: ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಸಮೀಪ ನಡೆದಿದೆ.
ಬೆಂಗಳೂರು ಮೂಲದ 28 ವರ್ಷದ ಶ್ರೀಕಾಂತ್ ಮೃತಪಟ್ಟ ಯುವಕ. ತಮ್ಮ ಸ್ನೇಹಿತರೊಂದಿಗೆ ಶುಕ್ರವಾರ ಕೊಡಚಾದ್ರಿ ಗಿರಿಶಿಖರ ವೀಕ್ಷಣೆಗೆ ಆಗಮಿಸಿದ್ದ ಅವರು, ಸಂಪೇಕಟ್ಟೆ ಸಮೀಪದ ಕಟ್ಟಿನಹೊಳೆ ಗ್ರಾಮದ ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಈ ವೇಳೆ ಶ್ರೀಕಾಂತ್ ಅವರಿಗೆ ಹಠಾತ್ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ತೀವ್ರ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಮೃತದೇಹವನ್ನು ಹೊಸನಗರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಬೆಂಗಳೂರಿನಿಂದ ಕುಟುಂಬಸ್ಥರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
