Trending

ಶಿವಮೊಗ್ಗ : ವೆಜ್ ಬದಲಿಗೆ ನಾನ್‌ವೆಜ್ ಬರ್ಗರ್ ಕೊಟ್ಟ ಹೋಟೆಲ್, ಜೊಮ್ಯಾಟೊಗೆ ದಂಡ

Spread the love

ಶಿವಮೊಗ್ಗ: ಆನ್‌ಲೈನ್ ಮೂಲಕ ಸಸ್ಯಾಹಾರಿ (ವೆಜ್) ಬರ್ಗರ್ ಆರ್ಡರ್ ಮಾಡಿದ ಗ್ರಾಹಕನಿಗೆ ಮಾಂಸಾಹಾರಿ (ನಾನ್‌ವೆಜ್) ಬರ್ಗರ್ ತಲುಪಿಸಿ ಸೇವಾ ಲೋಪ ಎಸಗಿದ್ದ ಖ್ಯಾತ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ (Zomato) ಹಾಗೂ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರಿ ದಂಡ ವಿಧಿಸಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಸೂಕ್ತ ಪರಿಹಾರ ನೀಡುವಂತೆ ಆಯೋಗವು ಕಡಕ್ ಆದೇಶ ಹೊರಡಿಸಿದೆ. ಈ ಮಹತ್ವದ ಪ್ರಕರಣದಲ್ಲಿ ದೂರುದಾರರ ಪರವಾಗಿ ಪ್ರಮುಖ ವಕೀಲರಾದ ಚಾಂದ್ ಎಸ್. ಅವರು ಯಶಸ್ವಿ ವಾದ ಮಂಡಿಸಿದ್ದರು.

ಗಣೇಶ ಹಬ್ಬದ ದಿನವೇ ನಡೆದಿದ್ದ ಎಡವಟ್ಟು

ಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆ ನಿವಾಸಿಯಾಗಿರುವ ನಂದೀಶ್ ಎಂಬುವವರು 2025ರ ಆಗಸ್ಟ್ 27ರಂದು ಪವಿತ್ರ ಗಣೇಶ ಚತುರ್ಥಿ ಹಬ್ಬದ ದಿನದಂದು ಮನೆಯಲ್ಲಿ ಪೂಜೆ ಮುಗಿಸಿ, ಜೊಮ್ಯಾಟೊ ಆಯಪ್ ಮೂಲಕ ₹313.15 ಪಾವತಿಸಿ ಸಸ್ಯಾಹಾರಿ ಬರ್ಗರ್ ಆರ್ಡರ್ ಮಾಡಿದ್ದರು. ಆದರೆ, ಮನೆಗೆ ತಲುಪಿದ ಪಾರ್ಸೆಲ್ ಬಿಚ್ಚಿ ನೋಡಿದಾಗ ಸಸ್ಯಾಹಾರದ ಬದಲಿಗೆ ಮಾಂಸಾಹಾರಿ ಬರ್ಗರ್ ಇರುವುದು ಕಂಡುಬಂದಿದೆ.

ಇದರಿಂದ ಆಘಾತಕ್ಕೊಳಗಾದ ನಂದೀಶ್ ತಕ್ಷಣವೇ ಸಂಸ್ಥೆಗೆ ದೂರು ನೀಡಿದ್ದರು. ಆಗ ಜೊಮ್ಯಾಟೊ ಕೇವಲ ಬರ್ಗರ್‌ನ ಹಣವನ್ನು ಮಾತ್ರ ಗ್ರಾಹಕನ ಖಾತೆಗೆ ರೀಫಂಡ್ ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತ್ತು.

ಆದರೆ, ಹಬ್ಬದ ದಿನದಂದೇ ಮನೆಯೊಳಗೆ ಮಾಂಸಾಹಾರ ತಲುಪಿಸುವ ಮೂಲಕ ತನ್ನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರಾದ ಚಾಂದ್ ಎಸ್. ಅವರ ಮೂಲಕ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂಸ್ಥೆ

ಪ್ರಕರಣದ ವಿಚಾರಣೆ ವೇಳೆ ಜೊಮ್ಯಾಟೊ ಕಂಪನಿಯು ವಿಚಿತ್ರ ವಾದ ಮಂಡಿಸಿತ್ತು. “ತಮ್ಮದು ಕೇವಲ ಗ್ರಾಹಕರು ಮತ್ತು ಹೋಟೆಲ್ ಅನ್ನು ಸಂಪರ್ಕಿಸುವ ಆನ್‌ಲೈನ್ ವೇದಿಕೆಯಷ್ಟೇ ಆಗಿದೆ. ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ನೀಡಿರುತ್ತಾರೆ. ಇದರಲ್ಲಿ ತಪ್ಪು ನಡೆದಿದ್ದರೆ ಅದಕ್ಕೆ ಹೋಟೆಲ್ ಹೊಣೆಯೇ ಹೊರತು ನಮ್ಮ ಯಾವುದೇ ಸೇವಾನ್ಯೂನತೆ ಇರುವುದಿಲ್ಲ” ಎಂದು ಜವಾಬ್ದಾರಿಯನ್ನು ಹೋಟೆಲ್ ಮೇಲೆ ತಳ್ಳಲು ಯತ್ನಿಸಿತು.

ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ನ್ಯಾಯಪೀಠವು ಮಹತ್ವದ ತೀರ್ಪು ಪ್ರಕಟಿಸಿದೆ.

 

[pj-news-ticker]